ಜೇನುಸಾಕಾಣಿಕೆ ಕುರಿತು ಉಪನ್ಯಾಸ

0
27
loading...

ಕನ್ನಡಮ್ಮ ಸುದ್ದಿ-ಶಿರಸಿ: ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಲು ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಜೇನುಸಾಕಾಣಿಕೆ ಸಹಕಾರಿ ಎಂದು ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಕಾಲೇಜಿನ ಉಪನ್ಯಾಸಕರಾದ ಶಂಕರ ಭಟ್ಟ ಹೇಳಿದರು.
ಸೋಂದಾದಲ್ಲಿ ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ರಾಷ್ಟ್ರಿಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನ ಜೇನುಸಾಕಾಣಿಕೆ ಕುರಿತು ಅವರು ಉಪನ್ಯಾಸ ನೀಡಿದರು. ಜೇನುತುಪ್ಪ ಮತ್ತು ಜೇನುಮೇಣ ಔಷಧಿಯ ಗುಣವನ್ನು ಹೊಂದಿದ್ದು ಅನೇಕ ಕಾಯಿಲೆಗಳಿಗೆ ಇದು ಔಷಧಿಯಾಗಿದೆ. ಜೇನುತುಪ್ಪ ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲ್ಪಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಅನಿವಾರ್ಯ ದ್ರವ್ಯವಾಗಿದೆ. ಅಲ್ಲದೆ ಇದು ಮನುಷ್ಯನ ಬೌದ್ಧಿಕ ವಿಕಾಸಕ್ಕೂ ಶಾರೀರಿಕ ಸದೃಢತೆಗೂ ಪೂರಕವಾಗಿದೆ. ಆದ್ದರಿಂದ ಜೇನು ಸಾಕಾಣಿಕೆಯನ್ನು ಆಸಕ್ತಿಯಿಂದ ರೂಡಿಸಿಕೊಳ್ಳಿ ಎಂದ ಅವರು ಸಾಕಾಣಿಿಕೆ ವಿಧಾನ, ಅವುಳಲ್ಲಿನ ಪ್ರಬೇಧ, ಮುಂತಾದ ಅಮೂಲ್ಯ ವಿಷಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವದಿಸಿ, ಸಂಸ್ಕೃತ ವಾಂಙ್ಮಯದಲ್ಲಿ ಎಲ್ಲ ವಿಚಾರಗಳು ವಿಫುಲವಾಗಿ ತುಂಬಿಕೊಂಡಿವೆ. ಕೃಷಿ, ವಾಣಿಜ್ಯ, ಜೇನುಸಾಕಾಣಿಕೆಯೇ ಮೊದಲಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ನಾವು ನೋಡಬಹುದು. ಸಂಸ್ಕೃತ ವಿದ್ಯಾರ್ಥಿಗಳಾದವರು ಇದನ್ನು ಆಸಕ್ತಿಯಿಂದ ಅಭ್ಯಸಿಸಿ ಸಮಾಜ ಎದುರಿಗೆ ಬಿಚ್ಚಿಟ್ಟರೆ ಸಾರ್ಥಕವಾದ ಕಾರ್ಯವಾಗುತ್ತದೆ ಎಂದರು.
ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಸದಸ್ಯ ಲೋಕೇಶ ಹೆಗಡೆ ಮಾತನಾಡಿ, ಜೇನು ತುಂಬ ಶ್ರಮ ಜೀವಿ, ಅವುಗಳಂತೆ ನಾವೂ ಕೇವಲ ಸ್ವಾರ್ಥವನ್ನು ಮಾತ್ರ ಬಯಸದೇ ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಸಭೆಯ ನಂತರದಲ್ಲಿ ಗಣಪತಿ ಹೆಗಡೆ ಹಡಿನಬಾಳ ಅವರಿಂದ ಹರಿಕೀರ್ತನೆ ನಡೆಯಿತು. ರಾಮಾಯಣದ ‘ಸುಂದರಕಾಂಡ’ ಭಾಗದ ಕಥಾನಕವನ್ನು ಮನಸೂರೆಗೊಳ್ಳುವಂತೆ ನಿರೂಪಿಸಿದರು. ಇವರಿಗೆ ಗಜಾನನ ಯಾಜಿ ಮಂಡಿಗೆ ಹಾಗೂ ಮಹೇಶ ಭಟ್ಟ ಕಲ್ಗದ್ದೆ ಪಕ್ವವಾದ್ಯದಲ್ಲಿ ಸಹಕರಿಸಿದರು. ಶಿಬಿರಾರ್ಥಿಗಳು ಬೆಳಗಿನಿಂದ ಮಧ್ಯಾಹ್ನದವರೆಗೆ ಸೋಂದಾದ ಶಾಲ್ಮಲಾ ನದಿ ತೀರದಲ್ಲಿರುವ ಐತಿಹಾಸಿಕ ತಾಣವಾದ ಕೋಟೆಯ ಆವರಣವನ್ನು ಸ್ವಚ್ಛಗೊಳಿಸಿದರು.

loading...