ಡಿಜಿಟಲ್‌ ಮಾಧ್ಯಮ ಬಳಕೆ ಎಚ್ಚರ ಅಗತ್ಯ: ಹರಪನಹಳ್ಳಿ

0
32
loading...

ಕನ್ನಡಮ್ಮ ಸುದ್ದಿ-ಕಾರವಾರ: ಜನಪರವಾಗಿ ಹಲವು ಮಾಧ್ಯಮಗಳು ಕೆಲಸ ಮಾಡುತ್ತಿದ್ದು ನಿರಪೇಕ್ಷ ಮನೋಭಾವ ಇಂದಿನ ಅಗತ್ಯತೆಯಾಗಿದೆ. ಮಾಧ್ಯಮಗಳಿಗೆ ನ್ಯಾಯಾಧೀಶರ ವಿವೇಕ, ಸ್ಥಿತಪ್ರಜ್ಞತೆ ಹಾಗೂ ತಾಯಿಯೊಳಗಿನ ತಾಯ್ತನ ಬೇಕಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ್‌ ಹರಪನಹಳ್ಳಿ ಅಭಿಪ್ರಾಯಪಟ್ಟರು.
ನ್ಯೂಸ್‌ ಕೋಡ್‌ ಕರ್ನಾಟಕ, ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜು ಸಂಯುಕ್ತವಾಗಿ ಏರ್ಪಡಿಸಿದ್ದ ಡಿಜಿಟಲ್‌ ಮಾಧ್ಯಮ ಮತ್ತು ಯುವಜನತೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಡಿಜಿಟಲ್‌ ಕ್ರಾಂತಿಯಾಗಿದ್ದು, ಅಂಗೈಯಲ್ಲಿ ವಿಶ್ವದ ಮಾಹಿತಿ ಇದೆ. ಬೆರಳ ತುದಿಗೆ ನ್ಯೂಸ್‌ ಆಪ್‌ಗಳು ಮತ್ತು ವೆಬ್‌ಗಳು ಕನ್ನಡದಲ್ಲಿದ್ದು, ಈ ಸಾಲಿಗೆ ನ್ಯೂಸ್‌ ಕೋಡ್‌ ಹೊಸ ಸೇರ್ಪಡೆಯಾಗಿದೆ. ಡಿಜಿಟಲ್‌ ವೆಬ್‌ ನ್ಯೂಸ್‌ ಗ್ರಾಮೀಣ ಭಾರತದತ್ತ ಮುಖಮಾಡಬೇಕಿದೆ. ಜೊತೆಗೆ ಕೃಷಿಕರ ಹಾಗೂ ಕಾರ್ಮಿಕರ ಸಮಸ್ಯೆಗಳತ್ತ ಡಿಜಿಟಲ್‌ ಸುದ್ದಿ ಮಾಧ್ಯಮ ಮುಖ ಮಾಡಬೇಕಿದೆ ಎಂದರು. ನ್ಯೂಸ್‌ ಕೋಡ್‌ ನಗರದ ಸುದ್ದಿಗಳ ಜೊತೆ ತಾಲೂಕಾ ಕೇಂದ್ರಗಳಲ್ಲಿ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆದ ಘಟನೆಗಳನ್ನು ನೀಡುತ್ತಿದ್ದು, ಯುವಜನರಲ್ಲಿ ಸಾಮಾಜಿಕ, ರಾಜಕೀಯ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ನ್ಯೂಸ್‌ ಕೋಡ್‌ ನಗರಗಳು,ರಾಜ್ಯ, ದೇಶದ ಆಗು ಹೋಗುಗಳನ್ನು ಕ್ಷಣಾರ್ಧದಲ್ಲಿ ನೀಡುತ್ತಿದೆ. ಹೊರ ದೇಶದಲ್ಲಿನ ಕನ್ನಡಿಗರು ಕನ್ನಡದ ಪತ್ರಿಕೆಗಳನ್ನು ವೆಬ್‌ ಮೂಲಕ, ವಿವಿಧ ಪತ್ರಿಕೆಗಳ ಆಪ್‌ ಬಳಸಿ ಓದಲು ಪ್ರಾರಂಭಿಸಿದ್ದಾರೆ. ಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್‌ ಸ್ವರೂಪದಲ್ಲಿ ಪತ್ರಿಕೆಗಳನ್ನು ಓದುವ ದಿನಗಳು ಬರಬಹುದು ಎಂದರು.
ಜರ್ನಲಿಸ್ಟ ಅಸೋಶಿಯೇಶನ್‌ ಜಿಲ್ಲಾಧ್ಯಕ್ಷ ಮಂಜು ಕಡತೋಕ ಸಾಂದರ್ಭಿಕವಾಗಿ ಮಾತನಾಡಿದರು. ದೀಪಕ್‌ ಶೆಟ್ಟಿ ವೇದಿಕೆಯಲ್ಲಿದ್ದರು. ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿನಾಯಕ ಗಂಗೊಳ್ಳಿ ಅಧ್ಯಕ್ಷತೆವಹಿಸಿದ್ದರು. ಪ್ರೊ.ವಿ.ಎಂ.ನಾಯ್ಕ ಸ್ವಾಗತಿಸಿದರು.ಸುವರ್ಣ ಸಂಗಡಿಗರು ಪ್ರಾರ್ಥಿಸಿದರು. ಜರ್ನಲಿಸ್ಟ ಯುನಿಯನ್‌ ಕಾರ್ಯದರ್ಶಿ ಗಿರೀಶ್‌ ನಾಯ್ಕ ವಂದಿಸಿದರು. ಉಪನ್ಯಾಸಕಿ ಶಿಲ್ಪಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

loading...