ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

0
21
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ರಕ್ತಸ್ರಾವದ ತೀವೃ ಸಮಸ್ಯೆಯಿಂದಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿ ಸಾವನ್ನಪ್ಪಿದ ಬಾಣಂತಿಯ ಮರಣದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದ ವಿದ್ಯಮಾನ ಜ.16 ರಂದು ನಡೆದಿದೆ.
ಹಳಿಯಾಳ ಪಟ್ಟಣದ ಚವ್ಹಾಣಪ್ಲಾಟ್‌ ನಿವಾಸಿ ಮಹ್ಮದ ಯುಸೂಫ್‌ ರಾಜೇಸಾಬ ಹುಬ್ಬಳ್ಳಿವಾಲೆ ಇವರ ಪುತ್ರಿ ಬೇಬಿಆಯಿಶಾ ಗೌಸ್‌ಮೋದಿನ್‌ ಅತ್ತಾರ್‌ ಇವಳ ಸಾವಿಗೆ ನೋವು ಹಾಗೂ ತೀವೃ ಆಕ್ರೋಶ ವ್ಯಕ್ತಪಡಿಸಲಾಯಿತು. ಮುಸ್ಲಿಂ ಸಮುದಾಯದ ನೂರಾರು ಜನರು ಮೌನ ಮೆರವಣಿಗೆಯ ಮೂಲಕ ತಾಲೂಕಾ ಕಚೇರಿಗೆ ತೆರಳಿ ಜಿಲ್ಲಾ ಆರೋಗ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು.
ಘಟನೆಯ ವಿವರ:- ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು 2 ವರ್ಷದ ಹಿಂದೆ ಸಿಜೇರಿಯನ್‌ ಮೂಲಕ ಮಗು ಹೆತ್ತ ಬೇಬಿಆಯಿಶಾ ಗೌಸ್‌ಮೋದಿನ್‌ ಅತ್ತಾರ್‌ ಇವರನ್ನು ಎರಡನೇ ಹೆರಿಗೆಗೆ ಜ.8 ರಂದು ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಾರ್ಮಲ್‌ ಹೆರಿಗೆ ಮಾಡಿಸಿ ಗಂಡು ಮಗುವಾದ ನಂತರ ತೀವೃ ರಕ್ತಸ್ರಾವ ಆರಂಭಗೊಂಡಿತು. ಹೀಗಾಗಿ ಬಾಣಂತಿಯನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಯಿತು. ಅಲ್ಲಿ ಜ.13 ರಂದು ಚಿಕಿತ್ಸೆ ಫಲಕಾರಿಯಾಗದೇ ಬೇಬಿಆಯಿಶಾ ಗೌಸ್‌ಮೋದಿನ್‌ ಅತ್ತಾರ್‌ ಮೃತಪಟ್ಟಳು. ಅಂದೇ ರಾತ್ರಿ ಬಾಣಂತಿಯ ಶವವನ್ನು ಹಳಿಯಾಳಕ್ಕೆ ತಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡಲಾಯಿತು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ ಕದಂ ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಎರಡು ದಿವಸಗಳ ಒಳಗಾಗಿ ಸೂಕ್ತ ತನಿಖೆ ಹಾಗೂ ಕ್ರಮ ಕೈಗೊಳ್ಳುವುದಾಗಿ ತನ್ಮೂಲಕ ನೊಂದವರಿಗೆ ನ್ಯಾಯ ನೀಡುವುದಾಗಿ ಮೌಖಿಕವಾಗಿ ತಿಳಿಸಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಆದರೆ ಘಟನೆ ನಡೆದು 2 ದಿನಗಳು ಮುಗಿದರೂ ಸಹ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹೀಗಾಗಿ ಈ ಬಗ್ಗೆ ಶೀಘ್ರ ತನಿಖೆ ಕೈಗೊಂಡು ಮೃತ ಬಾಣಂತಿ ಬೇಬಿಆಯಿಶಾಳ ಸಾವಿಗೆ ಹಾಗೂ ತಾಯಿಯನ್ನು ಕಳೆದುಕೊಂಡ ಮಗುವಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಲಾಗಿದೆ.

loading...