ತಲಾಖ್‌ ರದ್ದುಗೊಳಿಸಿರುವ ಕ್ರಮ ವಿರೋಧಿಸಿ ಪ್ರತಿಭಟನೆ

0
16
loading...

ಕನ್ನಡಮ್ಮ ಸುದ್ದಿ-ವಿಜಯಪುರ: ತಲಾಖ್‌ ರದ್ದುಗೊಳಿಸಿರುವ ಕ್ರಮವನ್ನು ವಿರೋಧಿಸಿ ಮುಸ್ಲಿಂ ಬಾಂಧವರು ಮುಸ್ಲಿಂ ಮುತ್ತಹೀದಾ ಕೌನ್ಸಲ್‌ ನೇತೃತ್ವದಲ್ಲಿ ವಿಜಯಪುರ ನಗರದ ಡಾ.ಅಂಬೇಡ್ಕರ ವೃತ್ತದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನಾ ಧರಣಿ ನಡೆಸಿದರು. ತಲಾಖ್‌ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್‌ ಅಧ್ಯಕ್ಷ ಹಜರತ್‌ ತನ್ವೀರಪೀರಾ ಹಾಶ್ಮೀ ಮಾತನಾಡಿ, ತಲಾಖ್‌ ವಿಷಯದಲ್ಲಿ ಕೇಂದ್ರ ಸರ್ಕಾರ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದೆ. ತಲಾಖ್‌ ಎನ್ನುವ ವಿಷಯವನ್ನು ಮುಂದಿರಿಸಿಕೊಂಡು ರಾಜಕಾರಣ ಮಾಡಲು ಹೊರಟಿದೆ ಎಂದರು. ತಲಾಖ್‌ಗೆ ತನ್ನದೇ ಆದ ನಿಯಮಾವಳಿಗಳಿವೆ. ಕೇವಲ ಸುಮ್ಮಸುಮ್ಮನೆ ತಲಾಖ್‌ ಹೇಳಿದರೆ ತಲಾಖ್‌ ಸಿಂಧುವಾಗುವುದಿಲ್ಲ. ಸಕಾರಣವಿಲ್ಲದೇ ತಲಾಖ್‌ ಹೇಳಲು ಅವಕಾಶವೂ ಇಲ್ಲ. ಈ ಎಲ್ಲ ಅಂಶಗಳಿದ್ದರೂ ವಿನಾಕಾರಣ ಕೇಂದ್ರ ಸರ್ಕಾರ ತಲಾಖ್‌ ವಿಷಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಲಾಖ್‌ ವಿಷಯವಾಗಿ ಗೊಂದಲ ಸೃಷ್ಟಿಯ ಜೊತೆಗೆ ವೈಯುಕ್ತಿಕ ಕಾನೂನುಗಳನ್ನು ಸಹ ರದ್ದುಪಡಿಸುವ ವ್ಯವಸ್ಥಿತವಾದ ಹುನ್ನಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಯೋಜನೆ ರೂಪಿಸುವುದನ್ನು ಬಿಟ್ಟು ತಲಾಖ್‌ ವಿಷಯವಾಗಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಹತ್ತಾರು ಸಾಮಾಜಿಕ ಸಮಸ್ಯೆಗಳಿವೆ. ಬಡಜನತೆ ನಿತ್ಯ ಬೆಲೆಏರಿಕೆಯಿಂದ ತತ್ತರಿಸುವಂತಾಗಿದೆ. ಯುವಜನತೆ ಉದ್ಯೋಗವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಿ, ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕಾರ್ಯದಲ್ಲಿ ಗಮನ ಹರಿಸಬೇಕಾದ ಕೇಂದ್ರ ಸರ್ಕಾರ ಈ ಎಲ್ಲ ವಿಷಯಗಳನ್ನು ಬದಿಗೊತ್ತಿ ಕೇವಲ ತಲಾಖ್‌ ವಿಷಯವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಮೊಹ್ಮದ್‌ ಯೂಸೂಫ್‌ ಖಾಜಿ, ಪ್ರೊ.ಅಸ್ಲಂ ಮುಜಾವರ, ನ್ಯಾಯವಾದಿ ಲಾಹೋರಿ ಇದ್ದರು.

loading...