ತೇರದಾಳ ಪಟ್ಟಣಕ್ಕೆ ಅನ್ಯಾಯ: ಕರಾಳ ದಿನಾಚರಣೆ

0
31
loading...

ಕನ್ನಡಮ್ಮ ಸುದ್ದಿ-ತೇರದಾಳ: ತೇರದಾಳ ಪಟ್ಟಣವನ್ನು ಸರಕಾರ ತಾಲೂಕು ರಚನೆಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ತಾಲೂಕು ಹೋರಾಟ ಸಮಿತಿ ಸೋಮವಾರ ಕರಾಳ ದಿನಾಚರಣೆ ಆಚರಿಸಿತು. ಕಲ್ಲಟ್ಟಿ ಗಂಗಾಧರ ಮಠದಿಂದ ಹೊರಟ ಸಾವಿರಾರು ಪ್ರತಿಭಟನಾಕಾರರು, ಕೈಗೆ ಕಪ್ಪು ಬಟ್ಟೆ ಹಾಗೂ ಕಪ್ಪು ಬಾವುಟ ಹಿಡಿದುಕೊಂಡು ಬೃಹತ್‌ ಪ್ರತಿಭಟನೆ ನಡೆಸಿದರು. ದ್ವಾರ ಬಾಗಿಲು, ಪ್ರಭುದೇವರ ದೇವಸ್ಥಾನ, ಸಿದ್ದೇಶ್ವರ ಗಲ್ಲಿ, ಜವಳಿ ಬಜಾರ, ಗುಮ್ಮಟ ಗಲ್ಲಿ, ಅಂಬೇಡ್ಕರ್‌ ವೃತ್ತ, ತಮದಡ್ಡಿ ನಾಕಾ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಪರ ಜಯ ಘೋಷಣೆಗಳನ್ನು ಕೂಗಿದರು. ಬಸ್‌ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಂಗಡಿಗಳು ಬಂದ್‌: ಇನ್ನು ಕರಾಳ ದಿನಾಚರಣೆಗೆ ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಸವೇಶ್ವರ ವೃತ್ತದಲ್ಲಿ ಹೋರಾಟ ಸಮಿತಿ ಕೈಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ಶಿವಪ್ಪ ಖವಾಸಿ, ಅನ್ವರ ಸಂಗತ್ರಾಸ, ಮಾಸೂಂ ಇನಾಂದಾರ, ದಯಾನಂದ ಬಿಜ್ಜರಗಿ ಹಿಂದಿನ ಹಾಗೂ ಈಗಿನ ಸರಕಾರಗಳು ತಾಲೂಕು ಘೋಷಣೆ ಮಾಡಬೇಕಾದರೆ ಯಾವುದೇ ಮಾನದಂಡಗಳನ್ನು ಹಾಗೂ ಅರ್ಹತೆಗಳನ್ನು ಪರಿಶೀಲನೆ ನಡೆಸದೇ ತಾಲೂಕು ಘೋಷಣೆ ಮಾಡಿವೆ. ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ವಿಶೇಷ ತಹಸೀಲ್ದಾರ್‌ ಎಸ್‌.ಎಸ್‌. ಪೂಜಾರಿ ಅವರಿಗೆ ಹೋರಾಟ ಸಮಿತಿ ಮುಖಂಡರು ಸಲ್ಲಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಪ್ಪಣ್ಣ ದಾನಿಗೊಂಡ, ಮಗೆಪ್ಪ ತಾರದಾಳ, ಈರಪ್ಪ ಮಗದುಂ, ಸಾಥಬಚ್ಚೆ, ಎಂ.ಎನ್‌. ಜೈನರ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಹೋರಾಟ ಸಮಿತಿ ಸದಸ್ಯರು, ವ್ಯಾಪಾರಸ್ಥರು, ಯುವಕರು ಪಾಲ್ಗೊಂಡಿದ್ದರು.

loading...