ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ’

0
13
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಪ್ರಕ್ರಿಯೆ ಸಂದರ್ಭದಲ್ಲಿ ರೈತರಿಗೆ ಯಾವುದೇ ರೀತಿಯ ಅನಾನೂಕೂಲತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಾಗೂ ಕೃಷಿ ಮಾರಾಟ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಾದ್ಯಂತ 51 ಖರೀದಿ ಕೇಂದ್ರಗಳನ್ನು ತೆರೆದಿದ್ದು, 26 ಖರೀದಿ ಕೇಂದ್ರಗಳು ಅನುಮೋದನೆ ಹಂತದಲ್ಲಿವೆ. ಜ.15ರವರೆಗೆ ಈ ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಈ ಖರೀದಿ ಕೇಂದ್ರಗಳಲ್ಲಿ ಪ್ರತಿಯೊಬ್ಬ ರೈತರಿಂದ 20 ಕ್ವಿಂಟಲ್‌ ಎಫ್‌.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲಾಗುವುದು. ರೈತರು ತಮ್ಮ ಆಧಾರ ಕಾರ್ಡ ಪಹಣಿ ಪತ್ರಿಕೆ, (ಆರ್‌.ಟಿ.ಸಿ.) ಬ್ಯಾಂಕ್‌ ಖಾತೆ ಝರಾಕ್ಸ್‌ ಪ್ರತಿಯೊಂದಿಗೆ ಬೆಳೆ ಪ್ರಮಾಣ ಪತ್ರವನ್ನ ಹಾಜರುಪಡಿಸಿ ತೊಗರಿಯನ್ನು ನೀಡಬಹುದಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಲ್ಲಿ ವರ್ತಕರು ತರುವ ತೊಗರಿ ಉತ್ಪನ್ನವನ್ನು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳಲ್ಲಿ ಯಾವುದೇ ರೀತಿಯ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತ ನಿಧಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ತೊಗರಿ ಉತ್ಪನ್ನ ಖರೀದಿಸುವ ಪೂರ್ವ ಪಹಣಿ ಪತ್ರ ಕಡ್ಡಾಯವಾಗಿ ಸಂಬಂಧಪಟ್ಟವರಿಂದ ಪಡೆಯಬೇಕು. ಪಹಣಿಯನ್ನು ಪರಿಶೀಲಿಸಿ ತೊಗರಿ ಉತ್ಪನ್ನ ಬೆಳೆದಿರುವ ಕುರಿತು ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಘೊಷಿಸಿರುವಂತೆ ಎಫ್‌.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಲ್‌ ತೊಗರಿಗೆ 5450 ಹಾಗೂ ರಾಜ್ಯ ಸರ್ಕಾರದಿಂದ 550 ರೂ. ಸೇರಿದಂತೆ ಒಟ್ಟು 6 ಸಾವಿರ ರೂ. ನಿಗದಿಪಡಿಸಲಾಗಿದ್ದು, ರೈತರಿಂದ ಪಡೆಯುವ ತೊಗರಿಯನ್ನು ಸುರಕ್ಷಿತವಾಗಿ ಆಯಾ ಉಗ್ರಾಣಗಳಲ್ಲಿ ಶೇಖರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿ, ಆನ್‌ಲೈನ್‌ ನೋಂದಣಿ ವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಯಾಗುವಂತೆ ನೋಡಿಕೊಳ್ಳಲು ಈ ಸಂದರ್ಭದಲ್ಲಿ ಸಲಹೆ ನೀಡಿದರು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ : 08352-250073 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಚಬನೂರ, ಮಾರ್ಕೆಟಿಂಗ್‌ ಫೆಡರೇಶನ್‌ನ ವೆಂಕಟೇಶ ಹಾಗೂ ಜುಂಜರವಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

loading...