ದೇಶವನ್ನು ಕಟ್ಟುವ ಹೊಣೆಗಾರಿಕೆ ಯುವ ಜನರ ಮೇಲಿದೆ: ಪೂರ್ಣಿಮಾ

0
26
loading...

ಕನ್ನಡಮ್ಮ್‌ ಸುದ್ದಿ-ಕುಮಟಾ: ಈ ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಯೋಚಿಸಿ, ಈ ದೇಶವನ್ನು ಕಟ್ಟುವ ಹೊಣೆಗಾರಿಕೆ ಯುವ ಜನರ ಮೇಲಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಪ್ರಧಾನ ಪ್ರ ದ ನ್ಯಾ ದಂಡಾಧಿಕಾರಿ ಪೂರ್ಣಿಮಾ ಎನ್‌ ಪೈ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಕುಮಟಾ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಡಾ.ಎ.ವಿ ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನತೆ ಈ ದೇಶದ ದೊಡ್ಡ ಆಸ್ತಿ ಹಾಗೂ ಈ ದೇಶದ ಬೆನ್ನೆಲುಬು ಕೂಡಾ ಹಾಗಾಗಿ ತಮ್ಮ ಮುಂದಿನ ಬದುಕನ್ನು ಅರ್ಥ ಪೂರ್ಣಗೊಳಿಸಲು ಉತ್ತಮ ಮಾರ್ಗಗಳನ್ನು ಅನುಸರಿಸಬೇಕು. ಹಲವಾರು ಸಮಾಜ ಘಾತುಕ ಶಕ್ತಿಗಳು ಯುವಜನತೆಯನ್ನು ಕಾನೂನು ಬಾಹಿರ ಮಾರ್ಗಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತವೆ. ಅಂತವರಿಂದ ತುಂಬಾ ಜಾಗರೂಕರಾಗಿರಿ ಎಂದರು.
ಇಂದು ಸಮಾಜದಲ್ಲಿ ಹಲವಾರು ಅಫರಾದಗಳು ನಡೆಯುತ್ತವೆ. ಇಂತಹ ಕೆಲವು ಕೃತ್ಯಗಳಿಗೆ ಹೆಣ್ಣು ಮತ್ತು ಗಂಡುಗಳಲ್ಲಿರುವ ಅನುಪಾತದ ವ್ಯತ್ಯಾಸವು ಒಂದು ಕಾರಣವಾಗಿರಬಹುದು. ಹಾಗಾಗಿ ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ ಹಾಗೆಯೇ ಯಾವುದೇ ಕಾರಣಕ್ಕೂ ವರಧಕ್ಷಿಣೆಗಾಗಿ ಕೈಚಾಚಬೇಡಿ. ಅದೇ ರೀತಿ ಈಗ ನೀವು ಕಲಿಯುವ ವಯಸ್ಸು, ಪ್ರೀತಿ ಮತ್ತು ಪ್ರೇಮದ ಹೆಸರುಗಳಲ್ಲಿ ಯಾವುದೋ ಆಕರ್ಷಣೆಗೆ ಒಳಪಟ್ಟು ಸಾಕಿ ಸಲುಹಿದ ಪಾಲಕರನ್ನು ತೊರೆಯಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಒಳಿತು ಮತ್ತು ಕೆಡಕು ಎರಡು ಇವೆ. ಅವುಗಳನ್ನು ನಿಮ್ಮ ಜ್ಞಾನ ವೃದ್ಧಿಗಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, ದಿನನಿತ್ಯದ ಜೀವನದಲ್ಲಿ ಸ್ವಚ್ಛತೆ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ಎಚ್‌ ನಾಯ್ಕ ಮಾತನಾಡಿ ಒಬ್ಬ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಸಾಕ್ಷಿಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದಾದರೂ ಅಪರಾಧಗಳ ಕೃತ್ಯಗಳನ್ನು ನೋಡಿದಲ್ಲಿ ಆ ಬಗ್ಗೆ ನ್ಯಾಲಯದಲ್ಲಿ ಸಾಕ್ಷಿ ಹೇಳಲು ಹಿಂಜರಿಯಬಾರದು ಎಂದರು. ನ್ಯಾಯವಾದಿ ಮಮತಾ ಆರ್‌ ನಾಯ್ಕ ಯುವ ಜನರಲ್ಲಿ ದೇಶ ಕಟ್ಟುವ ಜವಾಬ್ದಾರಿ ಮತ್ತು ಮಕ್ಕಳ ಹಕ್ಕುಗಳ ಕುರಿತು ಪ್ರಚಲಿತ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಆರ್‌ ಎ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉಚಿತ ಕಾನೂನು ನೆರವಿನ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ವಿ ಎಂ ಪೈ ಉಪಸ್ಥಿತರಿದ್ದರು. ಮಧು ಹೆಗಡೆ ಸ್ವಾಗತಿಸಿದರು. ನಾಗರಾಜ ಹೆಗಡೆ ವಂದಿಸಿದರು.

loading...