ನರೇಗಾ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

0
15
loading...

ಕನ್ನಡಮ್ಮ ಸುದ್ದಿ

ಬೆಳಗಾವಿ : 14ನೇ ಹಣಕಾಸು ಯೋಜನೆಯಡಿಯ ನರೇಗಾ ಕಾಮಗಾರಿ ವಿಳಂಬ ಖಂಡಿಸಿ ಅಂಬೇವಾಡಿ ಗ್ರಾಮಸ್ಥರು ಸಣೆಕೆ, ಗುದ್ದಲಿ ಬುಟ್ಟಿಗಳೊಂದಿಗೆ ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

14ನೇ ಹಣಕಾಸಿನ ವರ್ಷದ ಕ್ರಿಯಾಯೋಜನೆ ತಯಾರಿಸಲಾಗಿದೆ. ಆದರೆ ಅಂಬೇವಾಡಿ ಗ್ರಾಮ ಪಂಚಾಯಿತಿ ಮಾತ್ರ ಇದರ ಅನುಮೋದನೆಗೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಯಾವುದೇ ನರೇಗಾ ಕಾಮಗಾರಿಗಳು ನಡೆಯುತ್ತಿಲ್ಲ. ಮೂರು ತಿಂಗಳಿಂದ ಗ್ರಾಪಂ ಮೀಟಿಂಗ್ ನಡೆಸಲಾಗಿಲ್ಲ. ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಹಾಗೂ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ತಕ್ಷಣ ನರೇಗಾ ಕಾಮಗಾರಿ ಆರಂಭವಾಗದಿದ್ದರೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಗ್ರಾಮಸ್ಥರು ಹಾಗೂ ತಾಲೂಕ ಪಂಚಾಯತ್ ಅಧಿಕಾರಿಗಳ ಮಧ್ಯೆ ಸುಮಾರು ಹೊತ್ತು ವಾಗ್ವಾದ ನಡೆಯಿತು. ಕಾಮಗಾರಿ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಾಪಂ ಅಧಿಕಾರಿಗಳು ಭರವಸೆ ನೀಡಿದರು.

ಗ್ರಾಪಂ ಸದಸ್ಯ ಅಪ್ಪಾಜಿ ನಾಯಕ, ಪ್ರಕಾಶ ಮಂಡೋಳಕರ, ಸುಧೀರ ಕಾಕತಕರ, ಅರುಣ ಕದಮ, ವಿಠ್ಠಲ ಸುಳಗೇಕರ, ಅನ್ನಪೂರ್ಣಾ ಕದಮ, ಶ್ರದ್ಧಾ ಚೌಗುಲೆ, ಸ್ಮಿತಾ ತೊರವೆ, ಸವಿತಾ ಚೌಗುಲೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...