ನಾಡು ನುಡಿ ಉಳಿವಿಗಾಗಿ ನಮ್ಮ ಹೋರಾಟ: ಸುನೀಲ್‌

0
40
loading...

ಕನ್ನಡಮ್ಮ ಸುದ್ದಿ-ಶಿರಸಿ: ಕನ್ನಡ ನಾಡು, ನುಡಿ, ಜಲವನ್ನು ಉಳಿಸಲು ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಲು 7 ವರ್ಷಗಳಿಂದ ಕರ್ನಾಟಕ ಯುವರಕ್ಷಣಾ ವೇದಿಕೆ ಶ್ರಮಿಸುತ್ತಿದ್ದು, ಇದೀಗ ಉತ್ತರ ಕನ್ನದಲ್ಲಿಯೂ ಸಂಘಟನೆಯನ್ನು ಆರಂಭಿಸಿದೆ ಎಂದು ಕರ್ನಾಟಕ ಯುವರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುನೀಲ್‌ ಎಂ. ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೇದಿಕೆಯು ಒಟ್ಟೂ 16 ಜಿಲ್ಲೆಗಳು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಂದು ಉತ್ತರ ಕನ್ನಡ ಜಿಲ್ಲೆಗೂ ಸಂಘಟನೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಯ ಎಲ್ಲಾ ತಾಲೂಕುಗಳಲ್ಲಿ ವೇದಿಕೆಯ ಘಟಕವನ್ನು ಸ್ಥಾಪಿಸಿ ಸಂಘಟನೆ ಬಲಗೊಳಿಸಲಾಗುವುದು ಎಂದರು.
ಕಾರ್ಮಿಕರ ಪರವಾಗಿ, ರೈತರ ಪರವಾಗಿ ನಮ್ಮ ಸಂಘಟನೆ ಹೋರಾಡಲಿದೆ. ಇಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಸಾಮಾಜಿಕ ಕೆಲಸಗಳಿಗೆ ಹೆಚ್ಚಿನ ಒತ್ತನ್ನು ವೇದಿಕೆ ನೀಡಲಿದ್ದು, ಉತ್ತರ ಕನ್ನಡದ ಭುವನೇಶ್ವರಿ ದೇವಿಯ ದೇವಾಲಯದ ಅಭಿವೃದ್ಧಿಗೂ ಕೆಲಸ ಮಾಡಲಿದೆ. ನಿಸ್ವಾರ್ಥ ಸೇವೆಯನ್ನು ನಮ್ಮ ಸಂಘಟನೆಯ ಕಾರ್ಯಕರ್ತರು ಮಾಡಲಿದ್ದು, ಸಮಾಜದಲ್ಲಿನ ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದರು.
ಪದಾಧಿಕಾರಿಗಳ ನೇಮಕ….
ಕರ್ನಾಟಕ ಯುವರಕ್ಷಣಾ ವೇದಿಕೆಯ ಜಿಲ್ಲಾ ಘಟಕವನ್ನು ರಚನೆ ಮಾಡಿ ಸೋಮವಾರ ನಡೆದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಅವರಿಗೆ ಆದೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ಹಸ್ತಾಂತರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ರತ್ನಾಕರ ನಾಯ್ಕ, ಉಪಾಧ್ಯಕ್ಷರಾಗಿ ಪ್ರಸನ್ನ ಚಿಕ್ಕನಮನೆ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ ಅರ್ಗೆಕರ್‌, ಕಾರ್ಯದರ್ಶಿಯಾಗಿ ಸಂತೋಷ ನಾಯ್ಕ, ಪ್ರದೀಪ ಆಚಾರಿ ಹಾಗೂ ಶಿರಸಿ ತಾಲೂಕಾ ಅಧ್ಯಕ್ಷರಾಗಿ ಸಾಯಿನಾಥ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಸಾಮಾಜಿಕ ಕಳಕಳಿ ಹೊಂದಿದ ಗೀತಾ ನಾಯ್ಕ ಅವರನ್ನು ಕರ್ನಾಟಕ ಯುವರಕ್ಷಣಾ ವೇದಿಕೆಯ ಮಹಿಳಾ ಘಟಕದ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರು ಇದ್ದರು.

loading...