ನೂತನ ರೈಲು ಮಾರ್ಗಕ್ಕೆ ಆಗ್ರಹಿಸಿ ಸಂಸದ ಉದಾಸಿಗೆ ಮನವಿ

0
21
loading...

ಮುಂಡರಗಿ: ಗದಗದಿಂದ ಮುಂಡರಗಿ, ಹೂವಿನಹಡಗಲಿ ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಮುಖಂಡರು ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಮಾತನಾಡಿ, ಗದಗದಿಂದ ಮುಂಡರಗಿ ಮಾರ್ಗವಾಗಿ ನೂತನ ರೈಲು ಮಾರ್ಗ ಮಂಜೂರು ಮಾಡುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲವಾಗಲಿದೆ. ನೂತನ ರೈಲು ಮಾರ್ಗದಿಂದ ಜನರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದ್ದು, ತಕ್ಷಣ ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.
ನೂತನ ರೈಲು ಮಾರ್ಗ ಮಂಜೂರು ಮಾಡುವ ಕುರಿತಂತೆ ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲಿದ್ದಾರೆ. ಮುಂಡರಗಿ ಸುತ್ತಮುತ್ತಲಿನ ಪ್ರದೇಶವು ತುಂಬಾ ವೇಗವಾಗಿ ಬೆಳೆಯುತಿದ್ದು, ರೈಲು ಓಡಾಡುವುದರಿಂದ ಕೈಗಾರಿಕೋದ್ಯಮ ಅಭಿವೃದ್ಧಿ ಹೊಂದುತ್ತದೆ. ಇದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ತಿಳಿಸಿದರು.
ರಾಜ್ಯ ಹೆದ್ದಾರಿ 45 ಅರಬಾವಿ-ಚಳ್ಳಕೇರಿ ರಸ್ತೆಯನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅದನ್ನು ತಾಲ್ಲೂಕಿನ ಹೆಸರೂರ ಮಾರ್ಗವಾಗಿ ರಚಿಸಿದರೆ ಪ್ರಯಾಣಿಕರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಕಲ್ಮಲಾ-ಸಿಗ್ಗಾವ್‌ ರಾಷ್ಟ್ರೀಯ ಹೆದ್ದಾರಿಯನ್ನು ಮುಂಡರಗಿ ಪಟ್ಟಣದ ಹೊರವಲಯದಲ್ಲಿ ಬೈ ಪಾಸ್‌ ಮೂಲಕ ಹೋಗುವಂತಾಗಬೇಕು ಎಂದು ತಿಳಿಸಿದರು.
ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, ಪಟ್ಟಣದಲ್ಲಿ ಅಂಚೆ ಕಚೇರಿಯು ಹಲವು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂಚೆ ಕಟ್ಟಡ ನಿರ್ಮಿಸಲು ವಿಶಾಲವಾದ ನಿವೇಶನವಿದ್ದು, ತಕ್ಷಣ ಅಲ್ಲಿ ಸುಸಜ್ಜಿತ ಅಂಚೆ ಕಚೇರಿಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು. ಮುಖಂಡರಾದ ಕರಬಸಪ್ಪ ಹಂಚಿನಾಳ, ನಾರಾಯಣಪ್ಪ ಇಲ್ಲೂರ, ವಿಜಯಕುಮಾರ ಶಿಳ್ಳೀನ, ಆನಂದಗೌಡ ಪಾಟೀಲ, ಆರ್‌.ಎಂ.ತಪ್ಪಡಿ, ಪ್ರಕಾಶಗೌಡ ಪಾಟೀಲ ಮೊದಲಾದವರು ಇದ್ದರು.

loading...