ಪ್ರಧಾನಿ ಮೋದಿ ರ್ಯಾಲಿಗೆ ಜಿಲ್ಲೆಯಿಂದ ಹತ್ತು ಸಾವಿರ ಕಾರ್ಯಕರ್ತರು: ಕೆ.ಜಿ.ನಾಯ್ಕ

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಬಿಜೆಪಿಯೇ ಆಯ್ಕೆ ಮಾಡುತ್ತದೆ ಹೊರತು ಈ ಆಯ್ಕೆಯಲ್ಲಿ ಸಂಘ ಪರಿವಾರದವರ ಯಾವುದೇ ಪಾತ್ರ ಇರುವುದಿಲ್ಲ ಎಂದು ಉತ್ತರಕನ್ನಡ ಬಿಜೆಪಿಯ ಉಸ್ತುವಾರಿ ವಿಕ್ರಮಾರ್ಜುನ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಾರ್ಜುನ ಹೆಗ್ಗಡೆ, ಪಕ್ಷವು ಅಭ್ಯರ್ಥಿಗಳ ಹೆಸರನ್ನು ಇವರೆಗೂ ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ನಿರ್ಣಯವೇ ಅಂತಿಮ. ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರಿಯ ಸಂಸದೀಯ ಮಂಡಳಿಯೇ ನಿರ್ಧಾರ ಮಾಡಲಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಫೆ.4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪರಿವರ್ತನಾ ರ್ಯಾಲಿಯ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹತ್ತು ಸಾವಿರಕ್ಕಿಂತ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಫೆ.14ಕ್ಕೆ ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರ ಬೃಹತ್‌ ಸಭೆಯನ್ನು, ಫೆ.27ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡ್ಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ರೈತರ ಸಮಾವೇಶ ಏರ್ಪಡಿಸಲಾಗಿದೆ. ಹಾಗೂ ಮಾರ್ಚ್‌ 3 ರಂದು ಉಡುಪಿಯಲ್ಲಿ ಮೀನುಗಾರರ ಸಮಾವೇಶವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಜಿ.ನಾಯ್ಕ ಹೇಳಿದರು.
ಇತ್ತೀಚೆಗೆ ತಾಲೂಕಿನಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಕೆ.ಜಿ.ನಾಯ್ಕ, ಪಕ್ಷದಲ್ಲಿ ಶಿಸ್ತು ಉಲ್ಲಂಘಿಸುವವರ ವಿರುದ್ಧ ಪಕ್ಷ ಉಗ್ರ ಕ್ರಮ ಕೈಗೊಳ್ಳಲಿದೆ. ಅಶಿಸ್ತನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಇದು ಇತರ ತಾಲೂಕುಗಳಿಗೂ ಸಹ ಹರಡಬಹುದು. ಶಿಸ್ತಿನ ವಿಷಯದಲ್ಲಿ ಪಕ್ಷ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ರಾಜೇಶ ನಾಯಕ, ಮಾಜಿ ಶಾಸಕ ಗಂಗಾಧರ ಭಟ್‌ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯೆ ರೂಪಾಲಿ ನಾಯ್ಕ, ರಾಮು ರಾಯ್ಕರ ಇನ್ನಿತರರು ಇದ್ದರು.

loading...