ಭೀಕರ ರಸ್ತೆ ಅಪಘಾತದಲ್ಲಿ ಪತ್ರಕರ್ತ ವೀರೇಶ ಸಾವು

0
33
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಬಾಗಲಕೋಟೆ ಬಿವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾಗಿದ್ದ, ಹಿರಿಯ ಪತ್ರಕರ್ತ ಡಾ. ವೀರಬಸಯ್ಯ (ವೀರೇಶ) ಹಿರೇಮಠ (34) ಅವರು ನಂದಗಡ ಸಮೀಪದ ಗುಂಡೋಳ್ಳಿ ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.
ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯ ಬಳಗ ಹೊಂದಿದ್ದ ಡಾ. ವೀರಬಸಯ್ಯ ಹಿರೇಮಠ ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ವಾಪಾಸು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ತಮ್ಮ ಊರಾದ ಹೊಸುರ ಗ್ರಾಮಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಅವರಿದ್ದ ಕಾರು ಮರಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ನಿ ಗೌರಿ (30), ಪುತ್ರರಾದ ವಿಜಯ (10), ವಿವೇಕ (6) ಹಾಗೂ ಕಾರು ಚಲಾಯಿಸುತ್ತಿದ್ದ ಸುನೀಲ ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಡಾ. ವೀರಬಸಯ್ಯ ಹಿರೇಮಠ ಮೃತ ದೇಹವನ್ನು ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ವೀರಬಸಯ್ಯ (ವೀರೇಶ) ಹಿರೇಮಠ ಮೂಲತಃ ಬದಾಮಿ ತಾಲೂಕಿನ ಹೊಸುರ ಗ್ರಾಮದವರು. ಇವರು ವಿಶ್ವವಾಣಿ, ಕನ್ನಡ ಪ್ರಭ, ವಿಜಯವಾಣಿ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಟಿವಿ 9, ಸುವರ್ಣ ಟಿವಿ, ಆಕಾಶವಾಣಿ ವರದಿಗಾರರಾಗಿ, ಸ್ಪರ್ಧಾ ಸ್ಪೂರ್ತಿ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಧಾರವಾಹಿಯಲ್ಲಿ ಕಿರು ನಟನೆ ಸೇರಿದಂತೆ ಹಾವೇರಿಯ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಈ ನಡುವೆ ಬಾದಾಮಿ ತಾಲೂಕಿನಲ್ಲಿ ಓದುಗ ದೊರೆ ಎಂಬ ಪತ್ರಿಕೆ ಪ್ರಾರಂಭಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರು ಡಾಕ್ಟರೇಟ್ ಪದವಿ ಪಡೆದಿದ್ದರು.
ಬಾಗಲಕೋಟೆ ಜಿಲ್ಲೆಯ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಒಡೆತನದ ಸಂಸ್ಥೆಯಲ್ಲಿ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಬಾಗಲಕೋಟೆ ಬಿವಿಬಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಧಾರವಾಡ ಆಸ್ಪತ್ರೆ ಬಿಡುವ ಮುನ್ನ ಅವರ ಪ್ರಾರ್ಥಿವ ಶರೀರಕ್ಕೆ ಕವಿಪವಿ ಬಳಗ ಹಾಗೂ ಸ್ನೇಹಿತರು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಿದರು. ಅಂತ್ಯ ಸಂಸ್ಕಾರ ಸಂಜೆ ಸ್ವಗ್ರಾಮ ಹೊಸುರನಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಅವರ ಶಿಷ್ಯ ಬಳಗ, ಪತ್ರಿಕಾ ಮಿತ್ರರು ಹಾಗೂ ವಿವಿಧ ಗಣ್ಯರು ಸೇರಿದಂತೆ ಇತರರು ಅಂತಿಮ ದರ್ಶನ ಪಡೆದರು.

loading...