ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಕಲಿಸಲು ಮುಂದಾಗಬೇಕು: ಶಾಸಕಿ ಶಾರದಾ

0
23
loading...

ಕನ್ನಡಮ್ಮ ಸುದ್ದಿ-ಕುಮಟಾ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೇ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಕಲಿಸಲು ಮುಂದಾಗಬೇಕು ಎಂದು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಹೇಳಿದರು.
ಅವರು ಶನಿವಾರ ಗುಡೇಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗುಡೇಕೊಪ್ಪದಂತಹ ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಶಾಲೆಯು ಉತ್ತಮವಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಅದ್ಧೂರಿಯಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ ಪಂ ಸದಸ್ಯ ರತ್ನಾಕರ ನಾಯ್ಕ ಅವರು ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗಿಸಿಕೊಳ್ಳಬೇಕು ಎಂದರು.
ಹೊಲನಗದ್ದೆ ಗ್ರಾ ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಾಲೆಯು ಅಭಿವೃದ್ಧಿ ಪಥದತ್ತ ಮುನ್ನಡೆಯಲು ಊರಿನ ನಾಗರಿಕರ ಹಾಗೂ ಪಾಲಕರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ತಾ ಪಂ ಅಧ್ಯಕ್ಷೆ ವಿಜಯಾ ಪಟಗಾರ ಇವರು ಸ್ಮರಣ ಸಂಚಿಕೆ “ಜ್ಞಾನ ಗುಡಿ” ಬಿಡುಗಡೆಗೊಳಿಸಿ, ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಹೊಂದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.
ಹೊಲನಗದ್ದೆ ಗ್ರಾ ಪಂ ಉಪಾಧ್ಯಕ್ಷೆ ಭಾರತಿ ಗುಡೇಅಂಗಡಿ, ಸದಸ್ಯರಾದ ಶಾರದಾ ಪಟಗಾರ, ರಮ್ಯಾ ಶೇಟ್‌, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ಆಚಾರಿ, ಎಸ್‌ ಡಿ ಎಂ ಸಿ ಅಧ್ಯಕ್ಷ ನಾಗರಾಜ ಪಟಗಾರ, ಗುಡೇಕೊಪ್ಪ ಊರ ಯಜಮಾನರಾದ ವೆಂಕಟ್ರಮಣ ಹನುಮ ಪಟಗಾರ, ಮಣಿಗಾರರಾದ ನಾರಾಯಣ ಬೊಬ್ಬು ಪಟಗಾರ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಗಣ್ಯರನ್ನು ವೇದಿಕೆಗೆ ಜಾನಪದ ಶೈಲಿಯಲ್ಲಿ ಕೋಲಾಟದಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಅಂಕಿತಾ ಸಂಗಡಿಗರು ಪ್ರಾರ್ಥಿಸಿದರು. ಸ್ವಸಹಾಯ ಸಂಘದ ಸದಸ್ಯರು ಸ್ವಾಗತ ಗೀತೆ ಹಾಡಿದರು. ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಂದ್ರು ಪಟಗಾರ ಸ್ವಾಗತಿಸಿದರು. ಶಾಲೆಯ ಮುಖ್ಯಾಧ್ಯಾಪಕ ಎಸ್‌ ಜಿ ಹೆಗಡೆ ವರದಿ ವಾಚಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ಹಾಗೂ ಪಿಡಿಓ ಬಾಲಚಂದ್ರ ಪಟಗಾರ ನಿರೂಪಿಸಿದರು. ಉದಯ ಪಟಗಾರ ವಂದಿಸಿದರು. ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಸಹಕರಿಸಿದರು. ನಂತರ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದ್ದು, ಗುಡೇಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

loading...