ಮಹಿಳೆಯರ ಶಿಕ್ಷಣ ಜ್ಯೋತಿ ಸಾವಿತ್ರಿಬಾಯಿ: ಸುನಿತಾ

0
32
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಭಾರತೀಯ ಸಮಾಜದಲ್ಲಿ ತುಂಬಿಕೊಂಡಿದ್ದ ಧರ್ಮ-ಜಾತಿ-ಲಿಂಗ ತಾರತಮ್ಯ ಹಾಗೂ ಜೀವ ವಿರೋಧಿ ಮೂಢನಂಬಿಕೆಗಳ ವಿರುದ್ಧ ಜೀವನದುದ್ದಕ್ಕೂ ಹೋರಾಟ ನಡೆಸಿ ಸಾಹಸ ಮೆರೆದ ತ್ಯಾಗಮಯಿ ಅರಿವಿನ ತಾಯಿ, ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ನಮ್ಮೆಲ್ಲರಿಗೆ ಆದರ್ಶವಾಗಬೇಕಿದೆ ಎಂದು ಸುನಿತಾ ಸೋನಗೋಜೆ ಹೇಳಿದರು.
ಅವರು ಬುಧವಾರ ಕಣಬರಗಿಯಲ್ಲಿ ಮಾನವ ಬಂಧುತ್ವ ವೇದಿಕೆ ಘಟಕ ಹಾಗೂ ಸಮತಾ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯುತ್ಸವದ ನಿಮಿತ್ಯ ‘ಅಕ್ಷರದ ತಾಯಿಗೆ ನಮನ ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂದು ಅವರು ಶಿಕ್ಷಣ ಜ್ಯೋತಿ ಹಚ್ಚದಿದ್ದರೆ ಭಾರತೀಯ ಮಹಿಳೆಯರು ಮನೆಯ ಹೊಸ್ತಿಲು ದಾಟಿ ಬರುತ್ತಿರಲಿಲ್ಲ. ಅಂಥ ಅಕ್ಷರದ ಅರಿವು ನೀಡಿದ ತಾಯಿಗೆ ನಮಿಸುವುದೇ ನಿಜವಾದ ವಿದ್ಯಾದೇವಿಯ ಪೂಜೆ ಮಾಡಿದಂತೆ. ಹೀಗಾಗಿ ನಮ್ಮ ದೇಶದ ಶಿಕ್ಷಣ ಕ್ರಾಂತಿಯ ಜ್ಯೋತಿ ಸಾವಿತ್ರಿಬಾಯಿ ಫುಲೆಯವರನ್ನು ಶಿಕ್ಷಕರ ದಿನದಂದು ದೇಶಾದ್ಯಂತ ಸ್ಮರಿಸುಂತಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರಕಾರಗಳು ಆಲೋಚಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಶತ-ಶತಮಾನಗಳಿಂದ ಅಕ್ಷರದಿಂದ ವಂಚಿತರಾದ ಜನರಿಗೆ ಅದರಲ್ಲೂ ಸ್ತ್ರೀಯರಿಗೆ ಶಿಕ್ಷಣ ಕೊಡುವ ಮೂಲಕ ಅವರಲ್ಲಿದ್ದ ಮೌಢ್ಯತೆ-ಕಂದಾಚಾರಗಳನ್ನು ಹೋಗಲಾಡಿಸುವ ಮುಖೇನ ಅನೇಕ ಸಾಮಾಜಿಕ ಸುಧಾರಣೆ ತರುವಲ್ಲಿ ಫುಲೆ ದಂಪತಿಗಳ ಕೊಡುಗೆ ಅಪಾರವಾಗಿದೆ. ಸಾಮಾಜದ ತೀವ್ರ ವಿರೋಧದ ನಡುವೆ ಹತ್ತು ಹಲವು ನೋವು, ಅಪಮಾನಗಳನ್ನು ಸಹಿಸಿಕೊಂಡು ಅಂದು ಸಾವಿತ್ರಿಬಾಯಿ ಫುಲೆ ಪುಣೆಯಲ್ಲಿ ಮೊದಲ ಶಾಲೆ ಪ್ರಾರಂಭಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ ಎಂದರು.
ತೇಜಸ್ವಿನಿ ಬಾಗೇವಾಡಿ ಮಾತನಾಡಿ, ಸಾವಿರಾರು ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ಸ್ತ್ರೀ ಶೋಷಣೆ ಮಾಡಿದ ನಮ್ಮ ಸಮಾಜದಲ್ಲಿ ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿಯೇ ಶೈಕ್ಷಣಿಕ-ಸಾಮಾಜಿಕ ಕ್ರಾಂತಿ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ಸ್ವತ: ಅನಕ್ಷರಳಾದ ಸಾವಿತ್ರಿಬಾಯಿ ತಮ್ಮ ಪತಿ ಜ್ಯೋತಿಬಾ ಫುಲೆಯವರಿಂದ ಅಕ್ಷರ ಕಲಿತು ಎಲ್ಲ ಸಮುದಾಯದವರಿಗೆ ಅಕ್ಷರದ ಅರಿವು ಮೂಡಿಸಿದ್ದಾರೆ. ಇಂದು ನಾವು ಅಕ್ಷರವಂತರಾದರೂ ಅಜ್ಞಾನಗಳಿಂದ ಹೊರಬರಲಾಗುತ್ತಿಲ್ಲ. ಹೀಗಾಗಿ ಸಾವಿತ್ರಿಬಾಯಿ ಫುಲೆಯವರಂಥ ಸಾಧಕರು ನಮಗೆ ಮುಖ್ಯವಾಗಿ ಸ್ತ್ರೀಯರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ಬಾಗೇವಾಡಿ ಮಾತನಾಡಿ, ಬುದ್ಧ-ಬಸವಣ್ಣ ಅವರುಗಳ ತತ್ವಗಳನ್ನೇ ಜೀವನಾದರ್ಶವಾಗಿಸಿಕೊಂಡು ಫುಲೆ ದಂಪತಿಗಳು ಅರ್ಥಪೂರ್ಣ ಚಳುವಳಿ ಕಟ್ಟುವ ಮೂಲಕ ವಿಚಾರ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅವರಿಂದ ಪ್ರಭಾವಿತರಾದ ಡಾ. ಬಿ.ಆರ್. ಅಂಬೇಡ್ಕರ ಅವರು ಸ್ವಸ್ಥ ಸಮಾಜದ ನಿರ್ಮಾಣದ ಸೂತ್ರಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನದ ಅಂಥ ಆಶಯಗಳಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಸುನಂದಾ ಪಟ್ಟಣಶೆಟ್ಟಿ, ಕೆ.ಕೆ. ಸುತಾರ, ಕೆ.ಎಂ. ಪಾಟೀಲ, ಜಯಶ್ರೀ ನಾಯಕ, ಮಹಾಂತೇಶ ಜಿ. ಒಡ್ಡಿನ, ಪ್ರಭುಲಿಂಗ ಎನ್. ಹೊಸೂರ, ಡಿ.ಬಿ. ಬಿಲ್ಲನವರ, ಮಲಿಕಜಾನ ಗದಗಿನ, ಶಾಲೆಯ ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು. ಅಶ್ವಿನಿ ಮುಚ್ಚಂಡಿಕರ ಸ್ವಾಗತಿಸಿದರು. ಗಿರಿಜಾ ತಳವಾರ ಕಾರ್ಯಕ್ರಮ ನಿರೂಪಿಸಿದರು. ಎಸ್. ಎಸ್. ಕುಂಬಾರ ವಂದಿಸಿದರು.

loading...