ಮಾಜಾಳಿ ಮೀನುಗಾರಿಕಾ ಬಂದರು: ಕಳೆದ ಮೂರು ದಶಕಗಳ ಕನಸು ನನಸಾಗುವುದೇ?

0
24
loading...

ಕನ್ನಡಮ್ಮ ಸುದ್ದಿ-ಕಾರವಾರ: ಕೆಲ ಭೌಗೋಳಿಕ ಕಾರಣಗಳಿಂದ ಕಳೆದ ಸುಮಾರು ಮೂರು ದಶಕಗಳಿಂದ ನಿರ್ಲಕ್ಷೊಳಗಾಗಿದ್ದ ಮಾಜಾಳಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು ಮೀನುಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕಳೆದ ಸುಮಾರು ಮೂರು ದಶಕಗಳ ಹಿಂದೆ ಕಾರವಾರ ಮತ್ತು ಅಂಕೋಲಾ ತಾಲೂಕಿನ ತೀರ ಪ್ರದೇಶಗಳು ನೌಕಾನೆಲೆ ಪಾಲಾದಾಗ ಮೀನುಗಾರರಿಗೆ ಅನುಕೂಲವಾಗಲೆಂದು ಮಾಜಾಳಿಯಲ್ಲಿ ಬಂದರು ನಿರ್ಮಾಣಕ್ಕೆ ಸ್ಥಳ ಗೊತ್ತುಪಡಿಸಲಾಗಿತ್ತು.
ಮಾಜಾಳಿಯ ಈ ಮೀನುಗಾರಿಕಾ ಬಂದರು ಅತ್ಯಾಧುನಿಕ ಸುಸಜ್ಜಿತ ಬಂದರಾಗಲಿದೆ. ಬಂದರು ವ್ಯಾಪ್ತಿಯೊಳಗೆ ಇಲಾಖೆಯ ಆಡಳಿತ ಕಚೇರಿ, ಮೀನು ಸಂಗ್ರಹ ಮತ್ತು ಶುಚಿಗೊಳಿಸಲು ಹಾಗೂ ಹರಾಜು ಪ್ರಕ್ರಿಯೆಗೆ ವಿಶೇಷ ವ್ಯವಸ್ಥೆ,ಐಸ್‌ ಪ್ಲಾಂಟ್‌,ಬಲೆ ಶೇಖರಣೆಗೆ ದಾಸ್ತಾನು ಶೆಡ್‌,ಮೀನು ಲೋಡಿಂಗ್‌ ಮತ್ತು ಸಾಗಾಟ ವಾಹನ ನಿಲುಗಡೆಗೆ ಪಾರ್ಕಿಂಗ್‌,ಇಂಧನ ಸರಬರಾಜು ಸೇರಿದಂತೆ ಎಲ್ಲ ವ್ಯವಸ್ಥೆ ಇರಲಿದೆ. ಜತೆಗೆ ಮೀನುಗಾರರಿಗೆ ವಿಶ್ರಾಂತಿ ಗೃಹಗಳು, ಬೋಟುಗಳ ದುರಸ್ಥಿಗಾಗಿ ನಿಗದಿತ ಸ್ಥಳ, ಹೊಟೆಲ್‌, ಸಾರ್ವಜನಿಕ ಶೌಚಾಲಯ ಚರಂಡಿ, ವಿದ್ಯುತ್‌ ವ್ಯವಸ್ಥೆ ಮುಂತಾದ ಮೂಲಭೂತ ಅವಶ್ಯಕತೆಗಳು ಸೇರಿದಂತೆ, ಅಗತ್ಯ ತುರ್ತು ಚಿಕಿತ್ಸಾ ಕೊಠಡಿ ಹಾಗೂ ಔಷ ಸಾಮಗ್ರಿಗಳು, ಸುರಕ್ಷತೆಗಾಗಿ ಭದ್ರತಾ ಕಚೇರಿ ಒಳಗೊಳ್ಳಲಿದೆ. ಈ ಮೀನುಗಾರಿಕಾ ಬಂದರಿಗೆ ಯಾವುದೇ ರೀತಿಯಿಂದ ಹಾನಿಯಾಗದಂತೆ ತಡೆಯಲು ಉತ್ತರದಿಂದ ಹಾಗೂ ದಕ್ಷಿಣ ಭಾಗದಿಂದ ಎರಡು ಸಮುದ್ರ ತಡೆಗೋಡೆಗಳನ್ನು ಸಹ ನಿರ್ಮಿಸಲು ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಒಟ್ಟಾರೆಯಾಗಿ ಮಾಜಾಳಿ ಮೀನುಗಾರಿಕಾ ಬಂದರು ನಿರ್ಮಾಣ ಸ್ಥಳೀಯ ಮೀನುಗಾರರ ಮೂರು ದಶಕಗಳ ಬೇಡಿಕೆಯೂ ಹೌದು. ಈ ಹಿಂದೆಯೇ ಕಾರ್ಯಗತವಾಗಬೇಕಿದ್ದ ಯೋಜನೆಗೆ ಕೆಲ ಕಾರಣ ನೀಡಿ ಅಡ್ಡಿಪಡಿಸಲಾಗಿತ್ತು. ಆದರೆ ಚುನಾವಣೆಯ ಹೊಸ್ತಿಲಲ್ಲಿ ನೆಪ ಮಾತ್ರಕ್ಕೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದಂತೆ ಮಾಡಿ ಆನಂತರ ನೆನೆಗುದಿಗೆ ಬೀಳದಿರಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

loading...