ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ: ಆನಂದ

0
12
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಂತಿಯುತವಾದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳಿಂದ ಯುವಕರು ಜೈಲುಪಾಲಾಗಿದ್ದಾರೆ. ಆದರೆ ಪ್ರತಿಭಟನೆ ವೇಳೆ ಪ್ರಚೋದನೆ ನೀಡಿದವರು ಇದೀಗ ಜೈಲುವಾಸ ಅನುಭವಿಸುತ್ತಿರುವ ಅಮಾಯಕ ಯುವಕರ ಬಿಡುಗಡೆಗೆ ಯಾವುದೇ ನೆರವು ನೀಡುತ್ತಿಲ್ಲ. ಈ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಈ ಭಾರಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಪಕ್ಷದ ವರಿಷ್ಠರು ಚುನಾವಣಾ ಸಿದ್ದತೆ ಬಗ್ಗೆ ಚರ್ಚೆ ನಡೆಸಿದ್ದು, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಲಾಗುವುದು. ಆಯಾ ಭಾಗಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಿ ಜನರಿಗೆ ಕುಮಾರಸ್ವಾಮಿ ಅವರ ಈ ಹಿಂದಿನ ಸಾಧನೆ ಹಾಗೂ ಮುಂದಿನ ಗುರಿಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು. ರಾಜ್ಯ ಕಾರ್ಯದರ್ಶಿ ಜಿ.ಎನ್‌ ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಕೊನೆಯಲ್ಲಿ ಜಿಲ್ಲೆಗೆ ಆಗಮಿಸಿ ಸಾವಿರಾರು ಕೋಟಿ ಕಾಮಗಾರಿಗೆ ಸಾಲನೆ ನೀಡಿದ್ದಾರೆ. ಆದರೆ ಇದು ಚುನಾವಣಾ ಪ್ರಚಾರಕ್ಕಾಗಿ ಮಾಡಿದ ತಂತ್ರ. ಅಧಿಕಾರ ಆರಂಭದಲ್ಲಿಯೇ ಜಿಲ್ಲೆಗೆ ಬಂದಿದ್ದರೇ ಇಷ್ಟೊತ್ತಿಗೆ ಆ ಕಾಮಗಾರಿಗಳು ಪ್ರಗತಿಯಲ್ಲಿರುತ್ತಿದ್ದವು. ಈಗ ಮಾಡಿರುವುದು ಕೇವಲ ತೋರಿಕೆಗೋಸ್ಕರ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ಮುನಾಫ್‌ ಮಿರ್ಜಾನಕರ್‌, ಜಿಲ್ಲಾ ಮಹಿಳಾಧ್ಯಕ್ಷೆ ಎನ್‌.ಆರ್‌ ತ್ರಿವೇಣಿ, ಮೋಹಿನಿ ನಾಯ್ಕ, ಸ್ವಾತಿ ಕಲ್ಗುಟಕರ್‌ ಇನ್ನಿತರರು ಇದ್ದರು.

loading...