ಯಡಳ್ಳಿ ಉತ್ಸವದಲ್ಲಿ ಯಕ್ಷ ಹಾಡುವಾದನ ಅಭಿನಯ ಸಮ್ಮಿಲನ

0
23
loading...

ಕನ್ನಡಮ್ಮ ಸುದ್ದಿ-ಶಿರಸಿ: ತಾಲೂಕಿನ ಯಡಳ್ಳಿಯಲ್ಲಿ ಸಂಘಟಿಸಲಾಗಿದ್ದ ಯಡಳ್ಳಿ ಉತ್ಸವದಲ್ಲಿ ಯಕ್ಷಹಾಡುವಾದನ ಅಭಿನಯ ಸಮ್ಮಿಲನ ಜನಮನ ಸೂರೆಗೊಂಡಿತು.
ಯಕ್ಷಗಾನ ಪ್ರಸಂಗ ಲಂಕಾದಹನದ ಹಾಡುಗಳನ್ನು ಅತ್ಯಂತ ಸೊಗಸಾಗಿ ಹಿಲ್ಲೂರ್‌ ರಾಮಕೃಷ್ಣ ಹೆಗಡೆ ಕೊಳಲು, ಮೃದಂಗ, ಚಂಡೆ ವಾದನಗಳೊಂದಿಗೆ ರಾಗ, ತಾಳ, ಲಯ ಬದ್ಧವಾಗಿ ಹಾಡಿದರೆ ತಮ್ಮ ಅಮೋಘವಾದ ಅಭಿನಯದ ಮೂಲಕ ಲಂಕಾದಹನದ ಚಿತ್ರಣ ಕಟ್ಟಿಕೊಟ್ಟವರು ಯಕ್ಷಗಾನದ ಖ್ಯಾತ ಕಲಾವಿದ ತೋಟಿಮನೆ ಗಣಪತಿ ಹೆಗಡೆ. ಪ್ರತಿಯೊಂದು ಹಾಡನ್ನು ಸೊಗಸಾಗಿ ಹಿಲ್ಲೂರ ಭಾಗವತರು ಹಾಡಿದರೆ ಆಯಾ ಸಂದರ್ಭದಲ್ಲಿ ಅಷ್ಟೇ ಸೊಗಸಾಗಿ ಕೊಳಲು ನುಡಿಸಿದವರು ಕಲ್ಲಾರೆಮನೆ ಪ್ರಕಾಶ ಹೆಗಡೆ ಹಾಗೆ ಮದ್ದಳೆ ವಾದನದಲ್ಲಿ ಎನ್‌.ಜಿ.ಹೆಗಡೆ ಯಲ್ಲಾಪುರ ಮತ್ತು ಚಂಡೆ ವಾದನದಲ್ಲಿ ಗಣೇಶ ಗಾಂವಕರ್‌ ಸಹಕರಿಸಿದರು.
ಅಭಿನಯ ಪೂರ್ವದಲ್ಲಿ ಭಾಗವತರು ‘ಹಾಡು ವಾದನ ಸಮ್ಮಿಲನದಲ್ಲಿ’ ಮಾನಿಷಾದಾ ಮತ್ತು ವಿದ್ಯುನ್ಮತಿ ಕಲ್ಯಾಣ ಹಾಗೂ ಇನ್ನಿತರ ಪ್ರಸಂಗಗಳ ಹಾಡುಗಳನ್ನು ಸುಮಧುರವಾಗಿ ಹಾಡಿದಾಗ ತಬಲಾದಲ್ಲಿ ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ ಕೊಳಲಿನಲ್ಲಿ ಕಲ್ಲಾರೆಮನೆ, ಮದ್ದಳೆಯಲ್ಲಿ ಎನ್‌.ಜಿ. ಚಂಡೆಯಲ್ಲಿ ಗಾಂವಕರ್‌ರವರು ಪ್ರೇಕ್ಷಕರ ಮನಸೂರೆಗೊಂಡರು.
ಯಡಳ್ಳಿ ಉತ್ಸವದ ಅಂಗವಾಗಿ ನಡೆದ ಜುಗಲ್‌ಬಂಧಿ ಕಾರ್ಯಕ್ರಮ ಕೂಡ ಜನಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರಿನ ಖ್ಯಾತ ಸೀತಾರ್‌ವಾದಕ ತಮ್ಮ ಸಿತಾರ ವಾದನದಲ್ಲಿ ರಾಗ್‌ ಪೂರಿಯಾ ಕಲ್ಯಾಣ್‌ದಲ್ಲಿ ಜಪ್‌ತಾಲ್‌, ಆಲಾಪ್‌, ದೃತ ತೀನತಾಲ್‌ಗಳನ್ನು ಪ್ರಸ್ತುತಗೊಳಿಸಿದರು. ಸಿತಾರ ವಾದನಕ್ಕೆ ಪ್ರಕಾಶ ಕಲ್ಲಾರೆಮನೆ, ಕೊಳಲಿನಲ್ಲಿ ಮತ್ತು ತಬಲಾದಲ್ಲಿ ಲಕ್ಷ್ಮೀಶ ರಾವ್‌ ಕಲ್ಗುಂಡಿಕೊಪ್ಪ ತಮ್ಮ ಕೈಚಳಕ ಪ್ರದರ್ಶಿಸಿದರು.
ಪಂ. ಶ್ರೀಪಾದರಾವ್‌ ಕಲ್ಗುಂಡಿಕೊಪ್ಪ ಫೌಂಡೇಶನ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಯಡಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದು, ಸಂಘಟಕ ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.

loading...