ರೈತರು ಕಾಂಗ್ರೆಸ್‌ ಪಕ್ಷ ಮರೆಯಬಾರದು: ಸಚಿವ ದೇಶಪಾಂಡೆ

0
29
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ರಾಜ್ಯದ ಕಾಂಗ್ರೆಸ್‌ ಸರ್ಕಾರವು ಕೃಷಿಕ ಸಮೂಹಕ್ಕೆ ಹಲವಾರು ಉತ್ತಮ ಕೊಡುಗೆಗಳನ್ನು ನೀಡಿದ್ದು ರೈತರು ಕಾಂಗ್ರೆಸ್‌ ಪಕ್ಷವನ್ನು ಯಾವತ್ತೂ ಮರೆಯಬಾರದು ಎಂದು ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.
ಚಿಬ್ಬಲಗೇರಿ ಗ್ರಾಮದಲ್ಲಿ ಜ.5 ರಂದು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅನ್ನದಾತರು, ಬಡ್ಡಿ ರಹಿತ ಸಾಲ, ಬೆಳೆಸಾಲ ಮನ್ನಾ, ಬೆಳೆವಿಮೆ, ಇನ್‌ಪುಟ್‌ ಸಬ್ಸಿಡಿಯನ್ನು ನೇರವಾಗಿ ಆಯಾ ಫಲಾನುಭವಿಗಳ ಖಾತೆಗೆ ಜಮಾ ಮಾಡಿರುವುದು, ಕಬ್ಬಿನ ಫಸಲಿಗೆ ಸಹಾಯಧನ, ಮಾವು, ಅಡಿಕೆ ಬೆಳೆಗೆ ಬೆಳೆಹಾನಿ ಪರಿಹಾರ ಮೊತ್ತ, ವಿವಿಧ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿಕೆ ಮೊದಲಾದ ಕಾರ್ಯಗಳನ್ನು ರಾಜ್ಯ ಸರ್ಕಾರ ಮಾಡಿದೆ.
ಕೃಷಿಕರು ಮಾತ್ರವಲ್ಲದೇ ಬಹುಜನರಿಗೆ ಮನೆ-ಮನೆಗೆ ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆ ಮಾಡಿದೆ. ಈ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗಾಗಿ ಹರಿದು ಬಂದ ಅನುದಾನ ಈ ಹಿಂದಿನ ಯಾವುದೇ ಸರ್ಕಾರದ ಅವಧಿಯಲ್ಲಿ ಆಗಿಲ್ಲ ಎಂದರು.
ವಿದ್ಯುತ್‌ ನೀರನ್ನು ನೀರಾವರಿಗಾಗಿ ಬಳಸುವ ಕೊನೆಯ ಯೋಜನೆ:- ಕಾಳಿನದಿ ನೀರನ್ನು ವಿದ್ಯುತ್‌ ಉತ್ಪಾದನೆಗಾಗಿ ಬಳಸಲಾಗುತ್ತದೆ. ಆದರೆ ಕಾಳಿನದಿ ನೀರಾವರಿ ಯೋಜನೆಗಾಗಿಯೂ ಸಹ ಕಾಳಿನದಿ ನೀರು ಉಪಯೋಗಿಸಲಾಗುತ್ತದೆ. ವಿದ್ಯುತ್‌ ಉತ್ಪಾದನೆಗಾಗಿ ಬಳಸುವ ನೀರನ್ನು ನೀರಾವರಿಗಾಗಿ ಬಳಸುವದು ಇದೇ ಕೊನೆಯ ಯೋಜನೆ ಎಂದು ಸಂಪುಟ ಸಭೆಯು ತೀರ್ಮಾನಿಸಿದೆ. ತುಂಬಾ ಕಷ್ಟಪಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿ ವಿಶೇಷ ಪ್ರಭಾವ ಬಳಸಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು ಸಚಿವ ಆರ್‌.ವಿ. ದೇಶಪಾಂಡೆ.
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ, ಚಿಬ್ಬಲಗೇರಿ ಪಂಚಾಯತ ಅಧ್ಯಕ್ಷ ತುಕಾರಾಮ ಗೌಡಾ, ಸದಸ್ಯ ಕತ್ಬುದ್ದೀನ ನದಾಫ್‌, ತಾಲೂಕ ಪಂಚಾಯತ ಅಧ್ಯಕ್ಷ ರೀಟಾ ಸಿದ್ಧಿ, ಸದಸ್ಯ ದೇಮಾಣಿ ಶಿರೋಜಿ, ಜಿಲ್ಲಾ ಪಂಚಾಯತ ಸದಸ್ಯರಾದ ಮಹೇಶ್ರೀ ಸಂಜು ಮಿಶ್ಯಾಳಿ, ಕೃಷ್ಣಾ ಪಾಟೀಲ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ್‌ ಯಕ್ಕುಂಡಿ, ಗ್ರಾಮದ ಪ್ರಮುಖರಾದ ಪ್ರಕಾಶ ಫಾಕ್ರೆ, ಪರಶುರಾಮ ಹಳ್ಳೂರಕರ, ಸಂಭಾಜಿ ಹಳಿಯಾಳಕರ ಮೊದಲಾದವರು ವೇದಿಕೆಯಲ್ಲಿದ್ದರು.

loading...