ಲಿಂಗಾಯತ ಪರಾವಲಂಬಿ ಧರ್ಮವಲ್ಲ: ಮಾತಾಜಿ

0
24
loading...

ಕನ್ನಡಮ್ಮ ಸುದ್ದಿ-ಕೂಡಲಸಂಗಮ: ಲಿಂಗಾಯತ ಪರಾವಲಂಬಿ ಧರ್ಮವಲ್ಲ ಅದೊಂದು ಸ್ವಾವಲಂಬಿ ಧರ್ಮವಾಗಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗರು ಮಾತೆ ಮಹಾದೇವಿ ಹೇಳಿದರು.
ಕೂಡಲಸಂಗಮದಲ್ಲಿ ನಡೆದ 31ನೇ ಶರಣಮೇಳದ ಎರಡನೇ ದಿನದಂದು ನಡೆದ ಲಿಂಗಾಯತ ಧರ್ಮ ಹೋರಾಟ ಹಾಗೂ ಸಾಮಾಜಿಕ ಸಮಾನತೆಯಲ್ಲಿ ಯುವಕರ ಪಾತ್ರ ವಿಷಯದ ಯುವಜನ ಗೋಷ್ಠಿ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ ಬಸವಣ್ಣ ನಾಲ್ಕು ಕಾಲಿನ ಎತ್ತಲ್ಲ ಮನು ಕುಲವನ್ನು ಸಮಾನತೆಯಿಂದ ಎತ್ತಿ ಹಿಡಿದ ಮಹಾನ ಮಾನವತಾವಾದಿ ಎಂದು ಪಂಚಾಚಾರ್ಯರು ಅರಿತುಕೊಳ್ಳಬೇಕು. ಪಂಚಾಚಾರ್ಯರು ಗದಗ ಸಮಾವೇಶದಲ್ಲಿ ಎತ್ತು ಬಸವಣ್ಣನೆಂದು ಹುಲ್ಲು ತಿನ್ನಿಸುವುದರ ಮೂಲಕ ಬಸವಣ್ಣನನ್ನು ಎತ್ತಿಗೆ ಹೋಲಿಸುವ ಮೂಲಕ ಬಸವಣ್ಣನ ವಿರೋಧಿಗಳಾಗಿದ್ದಾರೆ ಇದನ್ನು ಬಸವ ಭಕ್ತರು ಅರಿತುಕೊಳ್ಳಬೇಕು. ಬಸವಣ್ಣ ಬರುವುದಕ್ಕಿಂತ ಪೂರ್ವದಲ್ಲಿ ಎಲ್ಲಿಯೂ ಬಸವಣ್ಣನ ದೇವಾಲಯಗಳು ಇರಲಿಲ್ಲ, ಬಸವಣ್ಣನ ನಂತರ ಬಸವಣ್ಣನ ದೇವಾಲಯಗಳು ನಿರ್ಮಾಣಗೊಂಡವು ಸಂಪ್ರದಾಯವಾದಿಗಳು ಇಲ್ಲಿ ನಂದಿ ರೂಪದ ಬಸವಣ್ಣನನ್ನು ಕೂಡಿಸಿದರು. ಆದರಿಂದ ಬಸವ ಭಕ್ತರು ನಂದಿ ರೂಪದ ಬಸವಣ್ಣನನ್ನು ತೆಗೆದು ಗುರು ಬಸವಣ್ಣನ ಮೂರ್ತಿ ಇಡುವ ಕಾರ್ಯವನ್ನು ಎಲ್ಲ ಬಸವ ಭಕ್ತರು ಮಾಡಬೇಕು. ಲಿಂಗಾಯತರು ರುದ್ರಪೂಜೆ ಮಾಡಬಾರದು, ರುದ್ರಪೂಜೆ ಮಾಡಿದರೆ ಲಿಂಗಾಯತ ಧರ್ಮಕ್ಕೆ ಅಪಚಾರ ಮಾಡಿದಂತೆ ಎಂದರು.
ಎಸ್‌.ದಿವಾಕರ ಮಾತನಾಡಿ ವೀರಶೈವವು ಧರ್ಮವೂ ಅಲ್ಲ, ಪಂಥವೂ ಅಲ್ಲ ಅದು ಕೇವಲ ಒಂದು ವೃತ್ತ ಅಷ್ಟೆ. ಸರ್ವ ಜಾತಿಗಳ ಒಕ್ಕೂಟ ಲಿಂಗಾಯತ ಧರ್ಮ.ಇದು ನಿರ್ಧಿಷ್ಟ ಕಾಲದಲ್ಲಿ ಬಸವಣ್ಣ ನಿಂದ ಸ್ಥಾಪಿಸಲ್ಪಟ್ಟಿತ್ತು ಎಂದರು. ಮಹಾರಾಷ್ಟ್ರದ ಅವಿನಾಶ ಬೋಶಿಕರ್‌ ಮಾತನಾಡಿ ತಮ್ಮ ತಮ್ಮ ಊರುಗಳಲ್ಲಿರುವ ಮಠಗಳಿಗೆ ಹೋಗಿ ನೋಡಿ, ಮಠದಲ್ಲಿ ಬಸವಣ್ಣನವರ ಭಾವಚಿತ್ರ, ವಚನ ಸಾಹಿತ್ಯ ಇರದಿದ್ದರೆ ಇಡಲು ತಿಳಿಸಿ. ಇಡಲಿಲ್ಲವಾದರೆ ಅಂತಹ ಸ್ವಾಮೀಜಿಗಳನ್ನು ಮಠದಿಂದ ಹೊರಹಾಕಿ ಎಂದರು. ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ, ಬಸವ ಧ್ವಜಾರೋಹಣವನ್ನು ಚನ್ನಬಸವಾನಂದ ಸ್ವಾಮೀಜಿ ಮಾಡಿದರು. ಹೈದರಾಬಾದದ ಧನರಾಜ ಜೀರಗಿ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ, ಚನ್ನಬಸವರಾಜ ಸ್ವಾಮೀಜಿ, ಆರ್‌.ಜಿ.ಶೆಟ್ಟಗಾರ, ದಿಲೀಪ್‌ ಭತಮುರ್ಗೆ, ಕ್ಯಾಪ್ಟನ್‌ ವಿಶ್ವನಾಥ ಮುಂತಾದವರು ಇದ್ದರು.

loading...