ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕು: ಪುಟ್ಟರಾಜು

0
27
loading...

ಕನ್ನಡಮ್ಮ ಸುದ್ದಿ-ಶಿರಸಿ: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಶಿಕ್ಷಕರಿಂದ ಆಗಬೇಕು. ಶಾಲೆಯ ಒಳಗೆ ಹಾಗೂ ಹೊರಗೆ ಶಿಕ್ಷಕರು ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಟಿ.ಪುಟ್ಟರಾಜು ಸಲಹೆ ನೀಡಿದರು.
ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಶಿಕ್ಷಕರು ಅತ್ಯುನ್ನತ ಮಾರ್ಗದರ್ಶನವನ್ನು ನೀಡಿ, ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು ಎಂದರು. ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಾಧನೆಯ ಶ್ರಮವಾಗಿ 1 ವರ್ಷದೊಳಗೆ ಫಲ ಸಿಗುತ್ತದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ 10 ವರ್ಷ ಕಾಯಬೇಕಾಗುತ್ತದೆ. ನಾವು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಬೆಳೆಸಿದಲ್ಲಿ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಅವರು ಉತ್ತಮ ಫಲಿತಾಂಶ ಪಡೆದಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಶಿಕ್ಷಣ ಎಂದರೆ ಸರ್ವಾಂಗೀಣ ಬೆಳವಣಿಗೆ. ಆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಮಕ್ಕಳಿಗೆ ಜ್ಞಾನ ಹೆಚ್ಚಿಸುವ ವಸ್ತುವಾಗಿರುತ್ತಾರೆ. ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದಲೇ ತಯಾರಾದ ಮಕರಂದ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಷ್ಣು ನಾಯ್ಕ, ದಿನೇಶ ಹೆಗಡೆ, ಸದಾನಂದ ಸ್ವಾಮಿ ಮತ್ತಿತ್ತರು ಇದ್ದರು. ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

loading...