ವಿದ್ಯಾರ್ಥಿಗಳಿಗೆ ಊಟ ಸರಿಯಾಗಿ ನೀಡದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ

0
18
loading...

ಕನ್ನಡಮ್ಮ ಸುದ್ದಿ-ಶಿರಸಿ: ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ಸರಿಯಾದ ಶಿಕ್ಷಣ ನೀಡುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಊಟ ಸರಿಯಾಗಿ ನೀಡದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆಯುವಂತೆ ಇಲ್ಲಿನ ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಠರಾವು ಮಾಡಲಾಯಿತು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ಸುರೇಶ ನಾಯ್ಕ ವಿಷಯ ಪ್ರಸ್ತಾಪಿಸಿ, ಕಲ್ಲಿ ಮೊರಾರ್ಜಿ ಶಾಲೆಯ ಕಾಲೇಜ್‌ ವಿಭಾಗದಲ್ಲಿ ಶಿಕ್ಷಣ ಸರಿಯಾಗಿ ನೀಡುತ್ತಿಲ್ಲ. ಊಟ, ತಿಂಡಿಯು ಅವ್ಯವಸ್ಥೆಯ ಆಗರವಾಗಿದೆ. ವಾರ್ಡನ್‌ ಸರಿಯಾಗಿಲ್ಲ ಎಂದು ಆರೋಪಿಸಿದರು. ಊಟ ಸರಿಯಿಲ್ಲ ಎನ್ನುವ ವಿದ್ಯಾರ್ಥಿನಿಯರಿಗೆ ಪ್ರಾಚಾರ್ಯರೇ ಹೊಡೆಯುತ್ತಾರೆ. ತಪ್ಪಾದ ಬಗ್ಗೆ ಹೇಳುವಂತೆಯೂ ಇಲ್ಲ ಎಂದು ಸದಸ್ಯೆ ರತ್ನಾ ಶೆಟ್ಟಿ ದೂರಿದರು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಜೊತೆಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆಯುವಂತೆ ಠರಾವು ಮಾಡಲಾಯಿತು.
ತಾಲೂಕಿನ ಭೈರುಂಬೆ ಗ್ರಾಮದಲ್ಲಿ ಕಾಲುಬಾಯಿ ರೋಗದಿಂದ ಜಾನುವಾರುಗಳು ಮೃತಪಟ್ಟಿವೆ. ಸೂಕ್ತ ವ್ಯಾಕ್ಸಿನೇಷನ್‌ ಮಾಡಿಲ್ಲವೇ? ಎಂದು ಪಶು ಇಲಾಖೆಯ ಅಧಿಕಾರಿ ಆರ್‌.ಜಿ.ಹೆಗಡೆ ಅವರನ್ನು ತಾಪಂ ಸದಸ್ಯರು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಮಾಹಿತಿ ನೀಡಿ, ಭೈರುಂಬೆಯಲ್ಲಿ ವ್ಯಾಕ್ಸಿನೇಷನ್‌ ಮಾಡುವ ಇಲಾಖೆಯ ಸಿಬ್ಬಂದಿ ಪಾಟೀಲ್‌ ಅವರು ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಂಬಳ ತಡೆಹಿಡಿಯಲಾಗಿದ್ದು, ಮೆಮೋ ಸಹ ನೀಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದರು. ಈ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ ಉಪಸ್ಥಿತರಿದ್ದರು.

loading...