ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಮುನ್ನಡೆಯ ಬೇಕು: ನಾಗರಾಜ

0
19
loading...

ಕನ್ನಡಮ್ಮ ಸುದ್ದಿ-ಕುಮಟಾ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆ ಪ್ರತಿಭೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಅಲ್ಲದೇ ಪ್ರತಿಯೊಬ್ಬರ ಆಸಕ್ತಿಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಪಡೆಯಲು ಸಾಧ್ಯ ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಅವರು ಶನಿವಾರ ತಾಲೂಕಿನ ಗೋಕರ್ಣದ ಮೊಡರ್ನ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್‌ ಡಿಜಿಟಲ್‌ ಲಿಟ್ರಸಿ ಮಿಷನ್‌ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಆಧುನಿಕ ಔದ್ಯೋಗಿಕ ಜಗತ್ತಿನಲ್ಲಿ ಕಂಪ್ಯೂಟರ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಹಾಗಾಗಿ ವಿದ್ಯಾರ್ಥಿ ದಿಶೆಯಲ್ಲಿ ಕಂಪ್ಯೂಟರನ ಸಾಮಾನ್ಯಜ್ಞಾನದ ಮಾಹಿತಿ ನೀಡುವ ಉದ್ದೇಶದಿಂದ ನಮ್ಮ ಟ್ರಸ್ಟ್‌ ವತಿಯಿಂದ ನ್ಯಾಷನಲ್‌ ಡಿಜಿಟಲ್‌ ಲಿಟ್ರಸಿ ಮಿಷನ್‌ ಅಡಿಯಲ್ಲಿ 14 ವರ್ಷ ಮೇಲ್ಪಟ್ಟ 800 ವಿದ್ಯಾರ್ಥಿಗಳಿಗೆ ಒಂದು ವಾರದ ತರಬೇತಿ ನೀಡಿ ಆನ್ಲೈನ್‌ ಪರೀಕ್ಷೆ ನಡೆಸಲಾಗಿತ್ತು. ಈ ಶಾಲೆಯಲ್ಲಿ ಒಟ್ಟೂ 75 ವಿದ್ಯಾರ್ಥಿಗಳು ಭಾಗವಹಿಸಿದ್ದು, 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ ನಾಯಕ ತೊರ್ಕೆ ಅವರು ಶಿಕ್ಷಕರ ಪರವಾಗಿ ವೃಂದಾ ಗಾಂವಕರ ಹಾಗೂ ಶಾಲಾ ಸಮಿತಿಯ ಪರವಾಗಿ ಸಂತೋಷ ನಾಯಕ ತೊರ್ಕೆಯವರನ್ನು ಸನ್ಮಾನಿಸಿ ಗೌರವಿಸಿದರು. ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಚಂದನ, ಚೈತ್ರ, ಅಂಕಿತ, ಅಂಕಿತಾ ನಾಯ್ಕ, ಅದಿತಿ, ಮೇಘಶ್ರೀ, ಆಶ್ಲೇಷ, ಮಾನಸ, ಶ್ರೀನಿಧಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಅಲ್ಲದೇ ನ್ಯಾಷನಲ್‌ ಡಿಜಿಟಲ್‌ ಲಿಟ್ರಸಿ ಮಿಷನ್‌ ಅಡಿಯಲ್ಲಿ ಉತ್ತೀರ್ಣರಾದ 49 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಜಿ ಕೆ ಹೆಗಡೆ, ನಾಗರಾಜ ಹಿತ್ಲಮಕ್ಕಿ, ಮಹೇಶ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವಿಸ್‌ ಸ್ವಾಗತಿಸಿದರು. ಅರುಣ ಕವರಿ ಹಾಗೂ ಶೀಲಾ ಮೇಸ್ತ ನಿರೂಪಿಸಿದರು. ಜಮಿಯಾನಾ ಸೈಯ್ಯದ್‌ ವಂದಿಸಿದರು.

loading...