ವಿವೇಕಾನಂದರ ಜೀವನ ಚರಿತ್ರೆ ವಿದ್ಯಾರ್ಥಿಗಳು ತಿಳಿಯಬೇಕು

0
74
loading...

ಕನ್ನಡಮ್ಮ ಸುದ್ದಿ-ಲೋಕಾಪುರ: ದೇಶದ ಭದ್ರತೆ ಮತ್ತು ಯುವಕರ ಜವಾಬ್ದಾರಿ ಏನೆಂಬುದನ್ನು ಅರಿಯಲು ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಶಾಸಕ ಗೋವಿಂದ ಎಂ. ಕಾರಜೋಳ ಹೇಳಿದರು.
ಸ್ಥಳೀಯ ಸಿ.ಎಂ.ಪಂಚಕಟ್ಟಿಮಠ ಪ್ರಥಮ ದರ್ಜೇ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜಯಂತಿ ಆಚರಣೆ ಮತ್ತು ಬಡವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರು ತಮ್ಮ ಬಾಲ್ಯದಿಂದಲೇ ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮುಂದೆ ಅವರು ಸಮಾಜದ ಏಳ್ಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದರು. ಇಂದು ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ಯುವಕರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವ ಪೀಳಿಗೆ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಸ್ವಾಮಿ ವಿವೇಕಾನಂದರು ನಿರ್ಗತಿಕರಲ್ಲಿ ದೇವರನ್ನು ಕಂಡರು. ಡಾ: ಬಾಬಾಸಾಹೇಬ ಅಂಬೇಡ್ಕರರವರ ಸರ್ವಧರ್ಮಗಳನ್ನು ಸಮಾನವಾಗಿ ಕಂಡು ವಿಶ್ವಧರ್ಮದ ಕನಸನ್ನು ಕಂಡರು. ಆಧುನಿಕ ಭಾರತ ಇನ್ನೂ ಅವರ ಚಿಂತನೆಗೆ ತಕ್ಕಂತೆ ಬದಲಾವಣೆ ಹೊಂದಬೇಕಿದೆ. ಅವರ ಸಂದೇಶಗಳ ಬೆಳಕಿನಲ್ಲಿ ದೇಶವನ್ನು ರೂಪಿಸಬೇಕಿದೆ ಎಂದು ಹೇಳಿದರು. ವಿವೇಕಾನಂದರು ಧರ್ಮಕ್ಕಿಂತ ಹೆಚ್ಚಾಗಿ ಮಾನವೀಯತೆಗೆ ಒತ್ತುಕೊಟ್ಟಿದ್ದರು. ಮೊದಲು ಮನುಷ್ಯ ಆಮೇಲೆ ಧರ್ಮ ಜನರು ಯಾವುದೇ ಜಾತಿ, ಧರ್ಮದಿಂದ ವಿಭಜನೆಯಾಗಬಾರದು. ಎಲ್ಲರೂ ಒಂದಾಗಿರುವ ಅವಕಾಶವಿರಬೇಕೆಂಬ ಆಶಯ ಹೊಂದಿದ್ದರು ಎಂದರು. ಜಾತಿ, ಧರ್ಮವನ್ನೆಲ್ಲ ಮೆಟ್ಟಿನಿಂತ ವಿವೇಕಾನಂದ ಅವರು, ಧರ್ಮದಲ್ಲಿದ್ದುಕೊಂಡೇ ಧರ್ಮವನ್ನು ಟೀಕಿಸಿ, ವಿಶ್ಲೇಷಿಸಿ ಹೊಸ ಭಾರತ ನಿರ್ಮಾಣಕ್ಕೆ ಕರೆಕೊಟ್ಟವರು ಎಂದರು.
ಪ್ರಾಚಾರ್ಯ ಬಿ.ಎಂ.ಬಡಿಗೇರ ಮಾತನಾಡಿ ಯುವಕರು ಸ್ವಾಮಿ ವಿವೇಕಾನಂದರ ಗುಣಗಳನ್ನು ಬೆಳಸಿಕೊಳ್ಳಬೇಕು ಭಾರತ ಎಂದರೆ ಜಗತ್ತಿಗೆ ಮಾದರಿಯಾಗಬೇಕು ಅಂತಹ ಗುಣಗಳನ್ನು ನಾವು ಬೆಳಸಿಕೊಳ್ಳಬೇಕು ಯುವಕರು ಜಾಗೃತರಾಗಿ ದುಷ್ಟಚಟಗಳಿಂದ ದೂರವಿರಬೇಕು. ಯುವಕರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವ ಹಂಬಲದಲ್ಲಿ ಇರಬೇಕು ಎಂದು ಹೇಳಿದರು.
ಶಾಸಕರು ಬಡ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ ವಿತರಿಸಿದರು. ಕುಮಾರ ಹುಲಕುಂದ, ಕೆ.ಆರ್‌.ಮಾಚಪ್ಪನವರ, ಸಿಂಧೂರ, ಉಪನ್ಯಾಸಕ ರೇವಣಸಿದ್ದಪ್ಪ, ಪರಸಪ್ಪ ತಳವಾರ, ಅಪ್ತಭಾಯಿ, ಎಸ್‌.ಪಿ.ಕೊಕಟನೂರ, ಜಯಲಕ್ಷ್ಮೀ ಕಿತ್ತೂರ, ಶಂಕರ ಸೊಪ್ಪಡ್ಲ, ದೀಲಿಪ, ಚಂದ್ರಕಾಂತ ರಂಗಣ್ಣವರ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಮುಂತಾದವರು ಇದ್ದರು.

loading...