‘ಸೂರ್ಯ’ ರಥಸಪ್ತಮಿ ಹಬ್ಬದ ಕೇಂದ್ರ ಬಿಂದು : ಸಂಧ್ಯಾ

0
27
loading...

ಗದಗ : ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ಬದಲಿಸುವ ಪರ್ವ ಕಾಲವೇ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ ರಥಸಪ್ತಮಿ ಹಬ್ಬದ ಕೇಂದ್ರ ಬಿಂದು. ಸೂರ್ಯ ಆರೋಗ್ಯ ಮತ್ತು ಐಶ್ವರ್ಯ ದತ್ತ ಎಂಬ ಕಾರಣಕ್ಕೆ ಆತನನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತಿದೆ ಎಂದು ಗದಗ-ಬೆಟಗೇರಿ ದೈವಜ್ಞ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಸಂಧ್ಯಾ ರಾಜು ವೆರ್ಣೆಕರ ಅಭಿಪ್ರಾಯಪಟ್ಟರು.
ಅವರು ಬುಧವಾರ ಗದುಗಿನ ದೈವಜ್ಞ ಸಮಾಜದ ಕಾರ್ಯಾಲಯದಲ್ಲಿ ಮಹಿಳಾ ಮಂಡಳದಿಂದ ರಥಸಪ್ತಮಿ ಅಂಗವಾಗಿ ಎರ್ಪಡಿಸಿದ್ದ ಸೂರ್ಯದೇವನ ವಿಶೇಷ ಪೂಜೆ, ಸಮಾಜದ ಮಹಿಳೆಯರಿಗೆ ಎರ್ಪಡಿಸಿದ್ದ ಉಡಿತುಂಬುವ ಕಾರ್ಯ ನೆರವೇರಿಸಿ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತಿದೆ ಉತ್ತಮ ಆರೋಗ್ಯ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಈ ಶುಭ ದಿನದಂದು ಸೂರ್ಯನನ್ನು ಭಕ್ತಿ ಮತ್ತು ಶೃದ್ಧೆಯಿಂದ ಪೂಜಿಸಲಾಗುತ್ತಿದೆ. ಈ ವರ್ಷ ಜನೇವರಿ 24ನ್ನು ದೇಶದೆಲ್ಲೆಡೆ ರಥಸಪ್ತಮಿಯನ್ನು ಆಚರಿಸಲಾಯಿತು ಎಂದರು. ನವಗ್ರಹಗಳಿಗೆ ಸೂರ್ಯನೇ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ ಹಿಂದೂ ಪುರಾಣಗಳಲ್ಲಿ ಅದು ಉಲ್ಲೇಖವಾಗಿದೆ. ಅದಕ್ಕೆಂದೇ ನಾವು ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಎಂದು ಸೂರ್ಯನ ಪೂಜೆಯನ್ನು ಎಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಸಮಸ್ತ ವಿಶ್ವಕ್ಕೂ ಸೂರ್ಯನೆ ಒಡೆಯ ಎಂಬುದನ್ನು ಕಂಡುಕೊಂಡ ನಮ್ಮ ಋಷಿಗಳು ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತ ಬಂದಿದ್ದಾರೆ.
ಆರೋಗ್ಯ ಮತ್ತು ಐಶ್ವರ್ಯ ದತ್ತ ಎಂಬ ಕಾರಣಕ್ಕೆ ಸೂರ್ಯನನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತಿದೆ. ಅಲ್ಲದೆ ಬೆಳಗಿನ ಸೂರ್ಯ ಎಳೆಬಿಸಿಲಿಲ್ಲ ದೇಹಕ್ಕೆ ಶಕ್ತಿ ನೀಡುವ ಅಂಶಗಳಿವೆ ಎಂಬುದೂ ವ್ಶೆಜ್ಞಾನಿಕವಾಗಿ ಸಾಭೀತಾಗಿದೆ. ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್‌ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ ಎಂದು ವಿವರಿಸಿದರು. ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು ಮಹಿಳಾ ಘಟಕದ ಕಾರ್ಯದರ್ಶಿ ಪುಷ್ಪಾ ಪಿ.ವೇರ್ಣೆಕರ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಾರ್ಯಕ್ರಮದಲ್ಲಿ ದೈವಜ್ಞ ಸಮಾಜದ ಹಿರಿಯ ಮಹಿಳೆಯರು, ಮಹಿಳಾ ಮಂಡಳದ ಸರ್ವ ಸದಸ್ಯರು ಪಾಲ್ಗೋಂಡಿದ್ದರು.

loading...