ಸೋಲಾರ್‌ ವಿದ್ಯುತ್‌ ಯೋಜನೆಯನ್ನು ಕೈಗೊಳುವಂತೆ ಆಗ್ರಹ

0
34
loading...

ಕನ್ನಡಮ್ಮ ಸುದ್ದಿ-ಶಿರಸಿ: ಶರಾವತಿ ಕಣಿವೆಯಲ್ಲಿ ಸರ್ಕಾರ ಶರಾವತಿ ಭೂಗತ ಜಲವಿದ್ಯುತ್‌ ಯೋಜನೆ ಕೈ ಬಿಡುವ ಜೊತೆಗೆ ಪರ್ಯಾಯವಾಗಿ ಸೋಲಾರ್‌ ವಿದ್ಯುತ್‌ ಯೋಜನೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ವೃಕ್ಷಲಕ್ಷ ಆಂದೋಲನದ ನಿಯೋಗ ಮಂಗಳವಾರ ಶಿರಸಿಯಲ್ಲಿ ಕೆನರಾವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದೆ.
ಶರಾವತಿ ಕಣಿವೆಯಲ್ಲಿ ಕರ್ನಾಟಕ ಪವರ್‌ ಕಾರ್ಪೋರೇಶನ್‌ ನಿರ್ಮಿಸಲು ಉದ್ದೇಶಿಸಿರುವ ಭೂಗತ ಜಲವಿದ್ಯುತ್‌ ಯೋಜನೆಯಿಂದ ಸುಮಾರು 800 ಎಕರೆ ಅರಣ್ಯ ನಾಶವಾಗಲಿದೆ. ಒಟ್ಟೂ 15 ಕಿ.ಮೀ ಉದ್ದದ 10 ಮೀ ಅಗಲದ ಟನೆಲ್‌ಗಳ ನಿರ್ಮಾಣಕ್ಕಾಗಿ 140 ಎಕರೆ ಅರಣ್ಯ ನಾಶವಾಗಲಿದೆ. ಪವರ್‌ಹೌಸ್‌ ನಿರ್ಮಾಣಕ್ಕಾಗಿ ಸುಮರು 60 ಎಕರೆ ನಾಶವಾಗಲಿದೆ. ರಸ್ತೆ, ಟನೆಲ್‌ಗಳಿಗಾಗಿ, ಪವರ್‌ಹೌಸ್‌ಗಾಗಿ, ಕಾಡುನಾಶ ಮಾಡುವುದರಿಂದ ಶರಾವತಿ ಕಣಿವೆ ಇಬ್ಭಾಗ ಮಾಡಿದಂತೆ ಆಗುತ್ತದೆ. ವನ್ಯಜೀವಿಗಳ ಕಾರಿಡಾರ್‌ ತುಂಡಾಗಲಿದೆ. ಸುಮಾರು 1,00,000 (ಒಂದು ಲಕ್ಷ) ಮರ ಗಿಡಗಳ ಮಾರಣ ಹೋಮವಾಗಲಿದೆ. ಕಾರ್ಗಲ್‌ನಿಂದ ಕಾನೂರು, ಕೋಗಾರ್‌ವರೆಗೆ, ಮಾವಿನಗುಂಡಿಯಿಂದ ಗೇರುಸೊಪ್ಪವರೆಗೆ ವನ್ಯ ಜೀವಿಗಳು ಅತಂತ್ರವಾಗಲಿವೆ ಎಂದು ತಿಳಿಸಲಾಯಿತು.
ಈವರೆಗೆ ಆಗಿರುವ ಅರಣ್ಯ ನಾಶ……
ಶರಾವತಿ ಕಣಿವೆಯಲ್ಲಿ 5 ಜಲಾಶಯಗಳು ಇವೆ. ಮುಳುಗಡೆ, ಪುನರ್‌ವಸತಿ, ವಿದ್ಯುತ್‌ ತಂತಿ ಮಾರ್ಗಕ್ಕಾಗಿ ಎರಡು ಲಕ್ಷ ಎಕರೆ ಅರಣ್ಯ ನಾಶವಾಗಿದೆ. ಗೇರು ಸೊಪ್ಪಾ (ಟೇಲರೇಸ್‌) ಜಲವಿದ್ಯುತ್‌ ಯೋಜನೆಗಾಗಿ 1000 ಹೆಕ್ಟೇರ್‌ ಅರಣ್ಯ ನಾಶವಾಗಿದೆ. 20 ವರ್ಷ ಹಿಂದೆ ರಾಜ್ಯ ಉಚ್ಛನ್ಯಾಯಾಲಯ ಶರಾವತಿ ಟೇಲರೇಸ್‌ ಯೋಜನೆಗೆ ತಡೆ ಆಜ್ಞೆ ನೀಡಿತ್ತು ಎಂಬುದನ್ನು ಪರಿಸರ ಕಾರ್ಯಕರ್ತರು ನೆನಪಿಸಿದ್ದಾರೆ. ಕೆಪಿಸಿ ಪ್ರಾಯೋಜಿಸಿದ ಶರಾವತಿ ಕಣಿವೆಯ ಸಮಗ್ರ ಪರಿಸರ ಅಧ್ಯಯನವನ್ನು ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿ 2002 ರಲ್ಲಿ ವರದಿ ನೀಡಿದೆ. ಶರಾವತಿ ಕಣಿವೆ ಅರಣ್ಯ ಬೃಹತ್‌ ಜಲ ವಿದ್ಯುತ್‌ ಯೋಜನೆಗಳು, ಗಣಿಗಾರಿಕೆ, ಏಕಜಾತಿ ನೆಡುತೋಪು, ಅತಿಕ್ರಮಣಗಳಿಂದ ತುಂಡು ತುಂಡಾಗಿದೆ. ಕಣಿವೆ, ಇನ್ನಷ್ಟು ಛಿದ್ರವಾಗಲು ಅವಕಾಶ ಬೇಡ, ಹೊಸ ಅರಣ್ಯ ನಾಶಿ ಯೋಜನೆಗಳು ಶರಾವತಿ ಕಣಿವೆಯಲ್ಲಿ ಬಂದರೆ ವಿನಾಶವೇ ಹೊರತು ಅಭಿವೃದ್ಧಿ ಅಲ್ಲ ಎಂದು ಅಭಿಪ್ರಾಯ ನೀಡಿದೆ. ಕಳೆದ ಹಲವು ವರ್ಷಗಳಿಂದ ಲಿಂಗನಮಕ್ಕಿ ಜಲಾಶಯ ತುಂಬಿಲ್ಲ ಅರ್ಧಮಾತ್ರ ತುಂಬುತ್ತಿದೆ. ಮಳೆ ಪ್ರಮಾಣ, ಒಳಹರಿವು ಕುರಿತು ಕೆಪಿಸಿ ನೀಡುವ ಮಾಹಿತಿ ಅರ್ಧ ಸತ್ಯವಾಗಿದೆ ಎಂದು ಆರೋಪಿಸಿದರು.
ಪುನಃ ಇನ್ನಷ್ಟು ಅರಣ್ಯ ನಾಶ ಮಾಡಿದರೆ ವನ್ಯ ಜೀವಿಗಳು ಕಣಿವೆಯಿಂದ ಹಳ್ಳಿಗಳಿಗೇ ದಾಳಿ ಇಡಲಿವೆ. ಸರ್ಕಾರ ಶರಾವತಿ ಕಣಿವೆಯಲ್ಲಿ ಹೊಸ ಜಲವಿದ್ಯುತ್‌ ಯೋಜನೆಯನ್ನು ಕೈಬಿಡಬೇಕು. ಶರಾವತಿ ಕಣಿವೆಯಲ್ಲಿ ಆಗಿರುವ ಪರಿಸರ ಅವಘಡ ಸಾಕು. ಪುನಃ ಭಾರೀ ಯೋಜನೆ ಹೆಸರಲ್ಲಿ ಇಲ್ಲಿಗೆ ಬರಬೇಡಿ. ಶರಾವತಿ ಕಣಿವೆ ಉಳಿಸಿ ಕೆಪಿಸಿ ಕೈಗೊಳ್ಳಲಿರುವ ಭೂಗತ ಜಲವಿದ್ಯುತ್‌ ಯೋಜನೆ ಕೈಬಿಡಿ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ ಮೂಲಕ ಅರಣ್ಯ ಸಚಿವ ರಮಾನಾಥ ರೈಗೆ ಶರಾವತಿ ಕಣಿವೆ ಉಳಿಸಿ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.
ಈ ವೇಳೆ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಅಶೀಸರ, ಪ್ರಮುಖರಾದ ಬಾಲಚಂದ್ರ ಸಾಯಿಮನೆ, ಆರ್‌.ವಿ.ಭಾಗವತ, ವಿಶ್ವನಾಥ ಬುಗಡಿಮನೆ, ಉಮಾಪತಿ ಕೆ.ವಿ., ರಮೇಶ ಕಾನಗೋಡ, ಗಣಪತಿ ಕೆ., ಮತ್ತಿತರರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

loading...