ಹಿರಿಯ ಪತ್ರಕರ್ತ ಬಿ.ಆರ್‌. ವಿಭೂತೆಗೆ ಅಕಾಡೆಮಿ ಪ್ರಶಸ್ತಿ

0
32
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕಳೆದ ಮೂರುವರೆ ದಶಕಗಳಿಂದ ಈ ಭಾಗದಲ್ಲಿ ಬಹುಭಾಷಾ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಬಿ.ಆರ್‌. ವಿಭೂತೆ ರವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬೆಂಗಳೂರಿನಲ್ಲಿ ಜ.24 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ಒಟ್ಟು 45 ಪತ್ರಕರ್ತರಿಗೆ 2017 ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ರವರು ವಿತರಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಾದ ಡಾ. ಪಿ. ಎಸ್‌. ಹರ್ಷ, ಅಕಾಡೆಮಿಯ ಅಧ್ಯಕ್ಷ ಎಮ್‌. ಸಿದ್ದರಾಜು ಹಾಗೂ ಇತರರು ಉಪಸ್ಥಿತರಿದ್ದರು.
ಬಾಳಕೃಷ್ಣ ರಾಮಚಂದ್ರ (ಬಿ.ಆರ್‌.) ವಿಭೂತೆ ರವರು ಕನ್ನಡ, ಮರಾಠಿ, ಇಂಗ್ಲೀಷ್‌ ಈ ಮೂರು ಭಾಷೆಗಳ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು ಈ ಭಾಗದ ಆಗು-ಹೋಗುಗಳ ಬಗ್ಗೆ ಬಲ್ಲವರಾಗಿದ್ದಾರೆ.
ಇಂಡಿಯನ್‌ ಎಕ್ಸ್‌ಪ್ರೆಸ್‌, ಕನ್ನಡಪ್ರಭ, ಕನ್ನಡಮ್ಮ, ಪುಢಾರಿ, ಲೋಕಧ್ವನಿ, ವಿಜಯಕರ್ನಾಟಕ ಮೊದಲಾದ ಹಲವಾರು ಪತ್ರಿಕೆಗಳಿಗೆ ವರದಿ ಮಾಡಿದ್ದಾರೆ. ಪತ್ರಿಕಾ ವರದಿ ಮಾತ್ರವಲ್ಲದೇ ವ್ಯಾಕರಣಬದ್ಧವಾಗಿ ಇಂಗ್ಲೀಷ್‌ ಭಾಷೆಯಲ್ಲಿ ಮತ್ತು ಅಕೌಂಟೆನ್ಸಿ ವಿಷಯಗಳಿಗೆ ಹಲವಾರು ವರ್ಷಗಳ ಕಾಲ ಟ್ಯೂಷನ್‌ ನೀಡಿದ್ದು, ಹಳೆಯ ಚಿತ್ರಪ್ರೇಮಿಗಳ ಸಂಗೀತ ಸಂಘ ರಚಿಸಿ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದರಫಿ ಅವರ ಪುಣ್ಯತಿಥಿ ನಿಮಿತ್ಯ ರಫಿ ಹಾಗೂ ಇತರ ಪ್ರಖ್ಯಾತ ಹಿನ್ನೆಲೆ ಗಾಯಕರ ಸಂಗೀತ ಸಂಜೆ ಏರ್ಪಡಿಸಿ ಹಳಿಯಾಳ ಚಿತ್ರ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಸಹ ಉಣಬಡಿಸಿದ ವ್ಯಕ್ತಿಯಾಗಿದ್ದಾರೆ. 77 ವರ್ಷ ವಯಸ್ಸಿನಲ್ಲಿಯೂ ಸಹ ಪತ್ರಿಕಾ ವರದಿಗಾರಿಕೆ ಮುಂದುವರಿಸಿರುವ ವಿಭೂತೆಯವರಿಗೆ ಈಗಾಗಲೇ ಉತ್ತರಕನ್ನಡ ಜಿಲ್ಲಾ ಪತ್ರಕರ್ತರ ಸಂಘದಿಂದ ಕೆ.ಶಾಮರಾವ ದತ್ತಿನಿಧಿ ಪ್ರಶಸ್ತಿ ಹಾಗೂ ಹಲವಾರು ಸನ್ಮಾನಗಳನ್ನು ಪಡೆದಿದ್ದಾರೆ.

loading...