ಅಂಡರ್-19 ವಿಶ್ವಕಪ್ ಕಾಂಗರೂ ಬೇಟೆಯಾಡಿದ ಯಂಗ್ ಟೈಗರ್ಸ್, ನಾಲ್ಕೆನೆ ಬಾರಿ ವಿಶ್ವಕಪ್ ಎತ್ತಿ ಹಿಡಿದ ಭಾರತ

0
38
loading...

ಮೌಂಟ್‌ ಮೌಂಗನ್ಯುಯ್‌: ಐಸಿಸಿ ಅಂಡರ್-19 ವಿಶ್ವಕಪ್‌‌ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಮಾಡಿದೆ. ನಾಲ್ಕು ಬಾರಿ ವಿಶ್ವಕಪ್‌ ಎತ್ತಿ ಹಿಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ನ್ಯೂಜಿಲೆಂಡ್‌ನ ಓವಲ್‌ ಮೈದಾನನಲ್ಲಿ ಇಂದು ನಡೆದ ಫೈನಲ್‌‌ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಪೃಥ್ವಿ ಶಾ ಪಡೆ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಯಂಗ್‌ ಇಂಡಿಯಾ ನಾಲ್ಕನೇ ವಿಶ್ವಕಪ್‌ಗೆ ಮುತ್ತಿಕ್ಕಿತು. ಜೊತೆಗೆ ಭಾರತಕ್ಕೆ ವಿಶ್ವಕಪ್‌ ತಂದ ಕೊಟ್ಟ ಮೊಹಮ್ಮದ್‌ ಕೈಫ್‌, ವಿರಾಟ್‌ ಕೊಹ್ಲಿ ಹಾಗೂ ಉನ್ಮುಕ್ತ್ ಚಾಂದ್ ಸಾಲಿಗೆ ಪೃಥ್ವಿ ಶಾ ಸೇರ್ಪಡೆಗೊಂಡರು.

ಇಂದು ಫೈನಲ್‌ನಲ್ಲಿ ಸೆಣೆಸಿದ ಇಂಡೋ-ಆಸೀಸ್‌ ತಂಡಗಳು ತಲಾ ಮೂರು ವಿಶ್ವಕಪ್‌ಗಳನ್ನು ಗೆದ್ದುಕೊಂಡಿದ್ದವು. ಹೀಗಾಗಿ ನಾಲ್ಕನೇ ವಿಶ್ವಕಪ್‌ ಗೆಲುವಿನ ಮೇಲೆ ಉಭಯ ತಂಡಗಳು ಕಣ್ಣಿಟ್ಟಿದ್ದವು. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಟೀಂ ಇಂಡಿಯಾ ಆಟಗಾರರು ಎದುರಾಳಿ ತಂಡವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಕಾಂಗರೂಗಳನ್ನು 47.2 ಓವರ್‌‌ಗಳಲ್ಲಿ ಕೇವಲ 216 ರನ್‌ಗಳಿಗೆ ಕಟ್ಟಿ ಹಾಕಿದರು.  217 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ದ್ರಾವಿಡ್ ಹುಡುಗರು ನಿರಾಂತಕವಾಗಿ ಗೆಲುವಿನ ದಡ ಸೇರಿ ನಾಲ್ಕನೇ ವಿಶ್ವಕಪ್‌ ಎತ್ತಿ ಹಿಡಿದರು.

ಈ ಹಿಂದೆ 2000ರಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಮೊಹಮ್ಮದ್ ಕೈಫ್‌ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದಿದ್ದರು. ನಂತರ 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. 2012ರಲ್ಲಿ ಉನ್ಮುಕ್ತ್‌ ಚಾಂದ್ ಪಡೆ ವಿಶ್ವಕಪ್ ಗೆದ್ದಿತ್ತು.  ವಿಶ್ವಕಪ್‌ ಎತ್ತಿಹಿಡಿದ ದ್ರಾವಿಡ್‌ ಬಾಯ್ಸ್‌… ಸೋಲಿಲ್ಲದ ಸರದಾರರಿಗೆ ಒಲಿದ ವಿಜಯಲಕ್ಷ್ಮೀ!

ಇತ್ತ, ಮೂರು ಬಾರಿ ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ 1988, 2002 ಮತ್ತು 2010ರಲ್ಲಿ  ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

loading...