ಇಂದಿನಿಂದ ಕಾಳಮ್ಮ ದುರ್ಗಮ್ಮ ದೇವಿ ಜಾತ್ರೆ ಪ್ರಾರಂಭ

0
20
loading...

ಜಯರಾಜ ಗೋವಿ
ಕನ್ನಡಮ್ಮ ಸುದ್ದಿ-ಯಲ್ಲಾಪುರ: ಯಲ್ಲಾಪುರದ ಗ್ರಾಮದೇವಿಯರಾದ ಕಾಳಮ್ಮ ದುರ್ಗಮ್ಮ ಜಾತ್ರೆ ಇಂದಿನಿಂದ ಫೆ.15ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಗ್ರಾಮ ದೇವಿ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ಜರುಗಲಿರುವ ಈ ಜಾತ್ರೆಗೆ ಜಿಲ್ಲೆಯ ಜೊತೆಗೆ ನಾಡಿನ ವಿವಿಧ ಭಾಗಗಳಿಂದ ಭಕ್ತರ ಮಹಾಪೂರವೇ ಹರಿದು ಬರುವುದಲ್ಲದೇ, ದೇವಿ ಕೃಪೆಗೆ ಪಾತ್ರರಾಗುವದನ್ನು ಕಾಣಬಹುದಾಗಿದೆ.
ಗ್ರಾಮ ದೇವಿ ಜಾತ್ರೆಗೆ ಪೌರಾಣಿಕ ಹಿನ್ನೆಲೆ :
ಗ್ರಾಮ ದೇವಿಯರಾದ ದುರ್ಗಮ್ಮ ಮತ್ತು ಕಾಳಮ್ಮ ಈ ಜಾತ್ರೆಯ ಕೇಂದ್ರ ಬಿಂದು. ನಗರದಿಂದ ಅನತಿ ದೂರದಲ್ಲಿರುವ ನಾರಾಯಣಗಿರಿ ಎಂಬಲ್ಲಿ ಓರ್ವ ಶೂದ್ರನಿಗೆ ಈ ಎರಡೂ ಮೂರ್ತಿಗಳು ಸಿಕ್ಕಾಗ ಇದನ್ನು ಆತ ಪ್ರತಿಷ್ಠಾಪನೆ ಮಾಡಿದ್ದ ಎಂಬ ಕಥನ ಕೇಳಿ ಬರುತ್ತದೆ. ಈ ಮೂರ್ತಿಗಳನ್ನು ಶಿವಣಿ ಕಟ್ಟಿಗೆಯಿಂದ ಮಾಡಲಾಗಿದೆ.
ಅಂಕೆ ಹಾಕುವುದು
ಜಾತ್ರೆಯ ಆರಂಭಕ್ಕೆ ಏಳು ದಿನಗಳ ಮೊದಲು ದುರ್ಗಮ್ಮ, ಕಾಳಮ್ಮ ದೇವಿಯರ ಮೂರ್ತಿಗೆ ಬಣ್ಣ ಬಳಿಯಲಾಗುತ್ತದೆ. ಅಂದು ಮೂರ್ತಿಗಳಿಗೆ ಜಲ ಸ್ನಾನ ಮಾಡಿಸಿ ಹೊಸದಾಗಿ ರಂಗು ಹಚ್ಚಲಾಗುತ್ತದೆ. ಇದಕ್ಕೆ ಅಂಕೆ ಹಾಕುವುದು ಎನ್ನಲಾಗುತ್ತದೆ. ಎಂಟನೆಯ ದಿನ ದೇವಿಯರ ಮೂರ್ತಿಗಳನ್ನು ಪುನ: ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ನಡೆಸಲಾಗುತ್ತದೆ.ಒಂಬತ್ತನೆಯ ದಿನ ಈ ಮೂರ್ತಿಗಳನ್ನು ಭವ್ಯ ಮೆರವಣಿಗೆಯಲ್ಲಿ ದೇವಿ ದೇವಸ್ಥಾನದಿಂದ ದೇವಿ ಮೈದಾನಕ್ಕೆ ಒಯ್ಯಲಾಗುತ್ತದೆ. ಇದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಕ್ಕ – ತಂಗಿಯರ ಮೆರವಣಿಗೆ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನತೆ ನೆರೆದಿರುತ್ತದೆ.
ದೇವಿ ಮೈದಾನದಲ್ಲಿ ಜಾತ್ರೆಯ ಒಂಬತ್ತು ದಿನವೂ ಸಹಸ್ರಾರು ಭಕ್ತರಿಂದ ಉಡಿ, ಹಣ್ಣುಗಾಯಿ ಮತಿತತರ ಸೇವೆ ನಡೆಯುತ್ತದೆ. ಒಂಬತ್ತನೇ ದಿನ ದೇವಿಯರು ದೇವಿ ಗದ್ದುಗೆಗೆ ಮರಳುತ್ತಾರೆ.
ಜಾತ್ರೆಯ ಮುಕ್ತಾಯ
ಜಾತ್ರೆಯ ಕೊನೆಯ ದಿನ ಮಹಾಪೂಜೆ ಸಲ್ಲಿಸಿ ಹಿಟ್ಟಿನಿಂದ ನಿರ್ಮಿಸಿದ ಕೋಣನ ಬಲಿ ನೀಡಿದ ನಂತರ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸಿ ಮೆರೆವಣಿಗೆ ಮೂಲಕ ಗಡಿ ಹೊರಗೆ ಇರುವ ವಿಸರ್ಜನಾ ಗದ್ದುಗೆಗೆ ಕರೆದೊಯ್ಯಲಾಗುತ್ತದೆ. ಭಕ್ತರ ನಿರ್ಗಮನದ ನಂತರ ದೇವಿಯರ ಕೈಗೆ ತೊಡಿಸಿದ ಬಳೆಗಳನ್ನು ಒಡೆದು ಬಂಧಮುಕ್ತಗೊಳಿಸುವದು ಇಲ್ಲಿನ ಪದ್ಧತಿ. ಭಕ್ತರಿಗೂ ಸಹ ದೇಗುಲಕ್ಕೆ ಪ್ರವೇಶವನ್ನು ನಿಷೇಧಿಸಲಾಗುತ್ತದೆ. 11ನೇ ದಿನ ದೇವಿಯರ ಪುನರ್‌ ಪೃತಿಷ್ಠಾಪನೆ ಬಳಿಕ ಪೂಜಾ ಕಾರ್ಯಗಳು ಎಂದಿನಂತೆ ನಡೆಯುತ್ತವೆ. ಈ ವಿಶಿಷ್ಟವಾದ ಪದ್ಧತಿ ರಾಜ್ಯದಲ್ಲಿಯೇ ಅಪರೂಪವಾದದ್ದು.

loading...