ಕಾನೂನು ಸುವ್ಯವಸ್ಥೆ ಧಕ್ಕೆ ತಂದರೆ ಕಠಿಣ ಕ್ರಮ

0
34
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಕಾನೂನಿನಡಿಯಲ್ಲಿ ದೂರುದಾರರಿಗೆ, ಸಾಕ್ಷಿದಾರರಿಗೆ ರಕ್ಷಣೆ ಕೊಡಲು ಪೊಲೀಸರು ಇದ್ದೆವೆ. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ.ಧಮಕಿ ನೀಡುವ ಅಪರಾಧಿಗಳು ಅವರ ಸಂಬಂಧಿಕರು ಹಳೆ ಪದ್ದತಿ ಕೈಬಿಡಬೇಕು. ಪೊಲೀಸ ಸಹ ಅರೋಪಿಗಳಿಗೆ ಭಯ ಇರುವಂತೆ ಖದರದಿಂದ ಕಾರ್ಯ ನಿರ್ವಹಿಸಿ ಎಂದು ಬೆಳಗಾವಿ ಉತ್ತರವಲಯ ಆರಕ್ಷಕ ಮಹಾ ನಿರೀಕ್ಷಕ ಅಲೋಕಕುಮಾರ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬೈಲಹೊಂಗಲ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯನ್ನೂದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಪ್ರಕರಣದ ಪರಿಸ್ಥಿತಿ ಎನಿದೆ ಎಂದು ಅರಿತುಕೊಂಡು ಯಾವುದೇ ಮುಲಾಜಿಗೆ ಒಳಗಾಗದೇ ಅಪರಾಧಿಗಳ ವಿರುದ್ದ ನಿರ್ಧಾಕ್ಷಣ್ಯವಾಗಿ ಕ್ರಮ ಕೈಕೊಂಡಾಗ ಮಾತ್ರ ಜನಸಾಮಾನ್ಯರಿಗೆ ಪೊಲೀಸರ, ಕಾನೂನಿನ ಮೇಲೆ ನಂಬಿಕೆ ಉಂಟಾಗುತ್ತದೆ ಎಂದರು.
ನೇಸರಗಿ ಠಾಣಾ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಮಟಕಾ, ಜೂಜಾಟ, ನಕಲಿ ಸರಾಯಿ ದಂಧೆ ರಾಜರೋಷವಾಗಿ ತೊಡಗಿರುವ ಕುರಿತು ದೂರುಗಳು ಬಂದಿದ್ದು, ಕೂಡಲೇ ಇದರಲ್ಲಿ ತೊಡಗಿದವರು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಕಾನೂನಿನ ಕುಣಿಕೆಯಡಿ ಮಟ್ಟ ಹಾಕಲಾಗುವದೆಂದು ಎಚ್ಚರಿಕೆ ನೀಡಿದರು. ಠಾಣೆಗೆ ದೂರು ನೀಡಲು ಬಂದವರ ಜೊತೆಗೆ ಸೌಹಾರ್ಧತೆಯಿಂದ ವರ್ತಿಸಿ, ಜನಸ್ನೇಹಿಯಾಗಿ ಕೂಡಲೇ ಸ್ಪಂದಿಸಬೇಕು. ಯಾವುದೇ ಆಮೀಷಕ್ಕೆ ಒಳಗಾಗಬಾರದು ಎಂದು ಪೊಲೀಸರಿಗೆ ನೀತಿ ಪಾಠ ಹೇಳಿದರು. ಸಾರ್ವಜನಿಕರು ಬೀಟ ಪೊಲೀಸರಿಗೆ, ಅಧಿಕಾರಿಗಳಿಗೆ ನೀಡಿದ ಮಾಹಿತಿಯನ್ನು ಗೌಪ್ಯಾಗಿಡಲಾಗುವದು. ಠಾಣಾ ವ್ಯಾಪ್ತಿಯಲ್ಲಿಯೇ ದೂರುದಾರರಿಗೆ ನ್ಯಾಯಸಮ್ಮತವಾದ ನ್ಯಾಯ ದೊರಕಸಿ ಕೊಟ್ಟರೆ ಅವರು ಮೇಲಾಧಿಕಾರಿಗಳಿಗೆ ಮೊರೆ ಹೊಗುವದು ತಪ್ಪುತ್ತದೆ ಎಂದರು.
ರೌಡಿಗಳಿಗೆ ಚಾರ್ಜ-ಉಪವಿಭಾಗದ ನೂರಾರು ರೌಡಿಗಳಿಗೆ ಪಾಠ ತೆಗೆದುಕೊಂಡ ಅಲೋಕಕುಮಾರ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ಕಠಿಣ ಕ್ರಮ ಹಾಗೂ ಜಿಲ್ಲೆಯಿಂದ ಗಡಿಪಾರು ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ದೂರುದಾರರ, ನೊಂದವರ, ಸಾಕ್ಷಿದಾರರ ಅಹವಾಲು ಆಲಿಸಿ ಕಾನೂನು ವ್ಯಾಪ್ತಿಯಲ್ಲಿ ನ್ಯಾಯ ದೊರಕಿಸುವದಾಗಿ ಹೇಳಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸುಧೀಂದ್ರ ರೆಡ್ಡಿ ಮಾತನಾಡಿ, ಜಿಲ್ಲೆಯಾದ್ಯಂತ ಕಾನೂನು ಸುವ್ಯಸ್ಥೆ ಕಾಪಾಡಲು ಸಾರ್ವಜನಿಕರು ಕೈಜೋಡಿಸಬೇಕೆಂದರು. ಪ್ರೋಬೆಷನರಿ ಎಸ್ಪಿ ಕ್ಷಮಾ ಮಿಶ್ರಾ ಇದ್ದರು.ಉಪವಿಭಾಗದ ಅಧೀಕ್ಷಕ ಜಿ. ಕರುಣಾಕರಶೆಟ್ಟಿ ಸ್ವಾಗತಿಸಿದರು. ಸಿಪಿಐ ಸಂಗನಗೌಡರ ನಿರೂಪಿಸಿದರು. ಸಿಪಿಐ ಗುರುನಾಥ ವಂದಿಸಿದರು.

loading...