ಕಾಳಿ ನದಿಯ ನೀರನ್ನು ಹರಿಸಲು ಒತ್ತಾಯಿಸಿ ಹೋರಾಟ

0
26
loading...

ಕನ್ನಡಮ್ಮ ಸುದ್ದಿ-ಧಾರವಾಡ: ಕಾಳಿ ನದಿಯ ನೀರನ್ನು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹರಿಸಲು ಒತ್ತಾಯಿಸಿ ಹೋರಾಟದ ರೂಪಿಸಲು ಫೆ.14ರಂದು ಧಾರವಾಡದ ಉಳವಿಚನ್ನಬಸವಶ್ವರ ದೇವಸ್ಥಾನದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ರಾಜ್ಯ ರೈತ ಸಂಘದ ಸಿದ್ಧಪ್ಪ ಕುರುಬರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರೈತ ಸಂಘ, ಕಾಳಿನದಿ ಹೋರಾಟಗಾರರ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಚಿಂತಕರು, ಬುದ್ಧಿಜೀವಿಗಳು ಸಭೆಗೆ ಆಗಮಿಸುವ ಮೂಲಕ ಸಲಹೆ-ಸೂಚನೆ ನೀಡುವಂತೆ ಕೋರಿದರು.
2003ರಲ್ಲಿಯೇ ಕಾಳಿನದಿ ನೀರು ತರಲು ಪಾದಯಾತ್ರೆ ಮಾಡಿದ್ದೇನೆ. ಅನ್ನ ಸತ್ಯಾಗ್ರಹ ನಡೆಸಿದ್ದೇನೆ. ಈವರೆಗೆ ಜಿಲ್ಲಾಡಳಿತ ಹಾಗೂ ಅಂದಿನ ಜಿಪಂ ಉಪಾಧ್ಯಕ್ಷರಾಗಿದ್ದ ವಿನಯ ಕುಲಕರ್ಣಿ ಈಗ ಸಚಿವರಾದರೂ ನೀರು ತರುವಲ್ಲಿ ಕಾರ್ಯಪ್ರವೃತ್ತರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಲಘಟಗಿಯ ಶಾಸಕ ಸಂತೋಷ ಲಾಡ್‌ ಗಂಭೀರವಾಗಿ ಪರಿಗಣಿಸಿ ಪ್ರಯತ್ನ ಮಾಡುವ ಮೂಲಕ ಅಲ್ಲಿನ ಸಚಿವ ಆರ್‌.ವಿ.ದೇಶಪಾಂಡೆ ಅವರ ಮೇಲೆ ಒತ್ತಡ ಹೇರಿದರೆ ಯೋಜನೆ ಜಾರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಮಹಾದಾಯಿ ಹೋರಾಟ ಈಗಾಗಲೇ ರಾಜಕೀಯ ತೀರುವು ಪಡೆದಿದೆ. ಹೀಗಾಗಿ ಹೋರಾಟ ಹಳ್ಳ ಹಿಡಿಯಿತು. ಆದರೂ, ಯೋಜನೆ ಅನುಷ್ಠಾನದವರೆಗೂ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ ಎಂದರು. ಇದೀಗ ಕಾಳಿನದಿಯ ನೀರನ್ನು ಯಾವರೀತಿ ತರಬೇಕೆಂಬ ರೂಪರೇಷ ಹಾಗೂ ಹೋರಾಟದ ನಿರ್ಧಾರ ಕೈಗೊಳ್ಳಲಿದ್ದು ರೈತರ ಬಗ್ಗೆ ಕಾಳಜಿ ಹೊಂದಿರುವ ಸಂಘಟನಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟದ ಕಮೀಟಿ ರಚನೆಗೆ ಸಹಕರಿಸುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶೋಭಾ ಚಲವಾದಿ, ಶೋಭಾ ಯಡಳ್ಳಿ, ನಾಗನಗೌಡ ಪಾಟೀಲ ಉಪಸ್ಥಿತರಿದ್ದರು.

loading...