ಗೊಂದಲದ ಗೂಡಾದ ಬಿಜೆಪಿ: ಕಾರ್ಯಕರ್ತರ ಅಸಮಾಧಾನ

0
24
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಮುಖಂಡರ ಒಡೆದು ಮನಸ್ಸುಗಳನ್ನು ಕಟ್ಟುವ ಉದ್ದೇಶದಿಂದ ಭಾನುವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಯುವಕರು ತಮ್ಮ ಅತೃಪ್ತಿ ಹೊರ ಹಾಕಿದರು.
ಚುನಾವಣೆ ಹೊಸ್ತಿಲಲ್ಲಿದೆ. ಬಿಜೆಪಿ ಮುಖಂಡರು ಒಗ್ಗಟ್ಟಾಗಬೇಕಿದೆ. ಪಕ್ಷದ ರಾಜ್ಯ ಮತ್ತು ರಾಷ್ಷ್ರೀಯ ಮುಖಂಡರು ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪನವರು ಯುವ ಮೋರ್ಚಾ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ನೀಡುವದಿಲ್ಲ. ಇದರಿಂದ ಪಕ್ಷ ಸಂಘಟನೆ ಹೊಡೆತ ಬೀಳುತ್ತದೆ. ಮುಖಂಡರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಹೈಕಮಾಂಡ ಟಿಕೇಟ್‌ ನೀಡಿದವರಿಗೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ವೇದಿಕೆ ಮೇಲೆ ಕೇವಲ ಮೇಲ್ವರ್ಗದವರು ಮಾತ್ರ ರಾರಾಜಿಸುತ್ತಾರೆ. ಹಿಂದುಳಿದ ವರ್ಗದವರಿಗೆ, ದಲಿತರನ್ನು ಕಡೆಗಾಣಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದವು. ಕೇವಲ ವೀರಶೈವ ಲಿಂಗಾಯತ ಕೋಮಿನ ಮುಖಂಡರಿಗೆ ಮಾತ್ರ ಬಿಜೆಪಿ ಹಿರಿಯರು ಮಣೆ ಹಾಕುತ್ತಿದ್ದಾರೆ ಎಂಬ ಪ್ರಬಲ ಆರೋಪಗಳು ಸಭೆ ಕೇಳಿ ಬಂದವು. ಹಲವು ಕಾರ್ಯಕರ್ತರ ವಿರುದ್ದ ಪೊಲೀಸ್‌ ಪ್ರಕರಣಗಳು ದಾಖಲಾಗಿವೆ ನಮ್ಮನ್ನು ಕೇಳುವವರು ಯಾರು ಎಂದು ನೋವಿನಿಂದ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಂಡರು.
ಮಾಧ್ಯಮದವರನ್ನು ಹೊರ ದಬ್ಬಿದ ಮುಖಂಡರು: ಈ ಸಭೆ ಪಕ್ಷದ ಆಂತರಿಕ ಸಭೆಯಾಗಿದೆ. ಇಲ್ಲಿ ಮಾಧ್ಯಮದವರಿಗೆ ಪ್ರವೇಶ ಇಲ್ಲ ಎಂದು ಹೊರ ದಬ್ಬಿದ ಪ್ರಸಂಗ ಸಹ ಈ ಸಂದರ್ಭದಲ್ಲಿ ನಡೆಯಿತು. ಇಲ್ಲಿ ನಡೆದ ಘಟನೆ ಕುರಿತು ದಯವಿಟ್ಟು ವರದಿ ಮಾಡಬೇಡಿ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಮಾಧ್ಯಮದವರಿಗೆ ವಿನಂತಿ ಮಾಡಿಕೊಂಡರು.
ಸರಿ ಇಲ್ಲ: ಈ ಘಟನೆ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಮುಖಂಡರಲ್ಲಿ ಒಳ ಜಗಳ, ಗುಂಪುಗಾರಿಕೆ ಎದ್ದು ಕಾಣಿಸುತ್ತಿದೆ. ಸಭೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೀರೇಶ ಬಲಕುಂದಿ, ಯುವ ಮೋರ್ಚಾ ಎಲ್ಲಾ ಪದಾಧಿಕಾರಿಗಳು, ಸ್ಪರ್ದಾಕಾಂಕ್ಷಿಗಳಾದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಎಚ್‌.ಆರ್‌.ಚನ್ನಕೇಶವ ಪಾಲ್ಗೊಂಡಿದ್ದರು.

”ಪಕ್ಷ ಸಂಘಟನೆ, ಚುನಾವಣೆ ಎದುರಿಸುವದು, ಸಮಸ್ಯೆಗಳ ಕುರಿತು ಕಾರ್ಯಕರ್ತರ ಸಭೆ ನಡೆದಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ.”
-ಸಿಂಗನಾಳ ವಿರುಪಾಕ್ಷಪ್ಪ,
ಬಿಜೆಪಿ ಜಿಲ್ಲಾ ಅಧ್ಯಕ್ಷ

loading...