ಚೆನ್ನಮ್ಮನ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡಲು ಒತ್ತಾಯ

0
28
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮನ ಐಕ್ಯ ಸ್ಥಳ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ರಾಷ್ಟ್ರೀಯ ಸ್ಮಾರಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಪಟ್ಟಣದ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮನ ಐಕ್ಯ ಸ್ಥಳದಲ್ಲಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ, ರಾಜ್ಯ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ಬೆಂಗಳೂರು ಮತ್ತು ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮ ಸ್ಮರಣೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಿದ್ದ 189ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ದೇಶದಲ್ಲಿ ಅನೇಕ ಮಹಾನ ಪುರುಷರ ಸಮಾಧಿ ಸ್ಥಳಗಳು ಸರ್ಕಾರದ ಕೋಟ್ಯಾಂತರ ಹಣದಿಂದ ಅಭಿವೃದ್ಧಿಯಾಗಿ ದೊಡ್ಡ ಪ್ರಮಾಣದ ಉತ್ಸವ, ಜಾತ್ರೆಗಳು ನಡೆಯುತ್ತಿದ್ದು, ಭಾರತ ದೇಶದ ಸ್ವತಂತ್ರ್ಯಕ್ಕಾಗಿ ವಸಹಾತುಶಾಹಿ ದ್ವಿಮುಖ ನೀತಿಯ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ದ ಪ್ರಪ್ರಥಮವಾಗಿ ಬಂಡೆದ್ದು ಥ್ಯಾಕರೆ ಅಂಥಹ ಅಧಿಕಾರಿಯನ್ನು ಕೊಂದು ಇಂಗ್ಲೆಂಡ ರಾಣಿಗೆ ಬಿಸಿ ಮುಟ್ಟಿಸಿ ಸೊಲುನಿಸಿದ ವೀರಮಾತೆಯ ಐಕ್ಯಸ್ಥಳ ಇಂದು ಅವಸಾನದ ಅಂಚಿನಲ್ಲಿರುವದು ಅತ್ಯಂತ ವಿಷಾಧನಿಯ. ಸರ್ಕಾರ ಪ್ರಾಧಿಕಾರದ ಅಡಿಯಲ್ಲಿ ಸುಮಾರು ರೂ 1ಕೋಟಿಯಲ್ಲಿ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಸ್ವಾಗತಾರ್ಹವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಿತ್ತೂರ ನಾಡಿನ ವೀರರ ಬಗ್ಗೆ ಹೆಚ್ಚಿನ ಅಧ್ಯಾಯನ ನಡೆಸಿ ಅವುಗಳ ಅಭಿವೃದ್ದಿ ಪಡಿಸಿ ಕಿತ್ತೂರ ಕೋಟೆ ಹಾಗೂ ಬೈಲಹೊಂಗಲ ಚೆನ್ನಮ್ಮಾಜಿಯ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಲ್ಲಿ ಸೇರಸುವಂತೆ ಒತ್ತಾಯಿಸಿದರು.

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಉಪವಿಭಾಗಾಧಿಕಾರಿ ಡಾ.ವಿಜಯಕುಮಾರ ಹೊನಕೇರಿ, ಲಿಂಗಾಯತ ಪಂಚಮಸಾಲಿ ರಾಜ್ಯ ಮಹಿಳ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿಣಿ ಪಾಟೀಲ, ಜಿಪಂ ಸದಸ್ಯ ಶಂಕರ ಮಾಡಲಗಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಸಾಮಾಜಿಕ ಹೋರಾಟಗಾರ ರಫೀಕ ಬಡೇಘರ ಮಾತನಾಡಿದರು. ಡಿವೈಎಸ್ಪಿ ಕರುಣಾಕರಶಟ್ಟಿ, ಉಪವಿಭಾಗಧಿಕಾರಿ ಶಿದ್ರಾಮೇಶ್ವರ, ತಹಶಿಲ್ದಾರ ನಾಗರಗಾಳ, ಸಮಗೊಳ್ಳಿ ಜಿಪಂ.ಸದಸ್ಯ ಅನಿಲ ಮೇಕಲಮರ್ಡಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಭಿಗೇರ, ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ. ಸಿ.ಬಿ ಗಣಾಚಾರಿ, ಲಿಂಗಾಯತ ಪಂಚಮಸಾಲಿ ತಾಲೂಕಾಧ್ಯಕ್ಷರುಗಳಾದ ಶ್ರೀಶೈಲ ಭೋಳಣ್ಣವರ, ಡಿ.ಆರ್‌ ಪಾಟೀಲ ಪುರಸಭೆ ಸದಸ್ಯ ಮಹೇಶ ಹರಕುಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

loading...