ತಾಯಂದಿರ ಮಡಿಲು ಸೇರದ ‘ಕಿಟ್‌’

0
45
loading...

ಎ.ಎಚ್‌.ಖಾಜಿ
ಶಿರಹಟ್ಟಿ: ಮಗು ಮತ್ತು ತಾಯಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ನೀಡುತ್ತಿದ್ದ ವಿವಿಧ ಬಳಕೆ ವಸ್ತುಗಳನ್ನೊಳಗೊಂಡ ಮಡಿಲು ಕಿಟ್‌ ವಿತರಣೆ ಸರಕಾರಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಸ್ಥಗಿತಗೊಂಡಿದೆ.
ನವಜಾತ ಶಿಶುವಿಗೆ ಅಗತ್ಯವಾಗಿ ಬೇಕಿರುವ ಟೋಪಿ,ಸ್ವೆಟರ್‌, ಅಂಡರವೇರ್‌,ಎಣ್ಣೆ,ಸೋಪು,ಪೌಡರ,ಟವಲ್‌, ತಾಯಿಗೆ ಅಗತ್ಯವಾಗಿರುವ ಸ್ವೆಟರ್‌, ಸ್ಕಾರ್ಫ್‌,ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನೊಳಗೊಂಡ ಬ್ಯಾಗಿಗೆ ಮಡಿಲು ಕಿಟ್‌ ಎಂದು ಹೆಸರಿಟ್ಟು ಬಾಣಂತಿ ಮತ್ತು ಮಗುವಿಗೆ ವಿತರಿಸುವ ಸರಕಾರದ ಯೋಜನೆ ಚಾಲ್ತಿಯಲ್ಲಿತ್ತು. ಆದರೆ, ಮಡಿಲು ಕಿಟ್‌ ಖರೀದಿ ಸಂಬಂಧ ರಾಜ್ಯ ಮಟ್ಟದ ಟೆಂಡರ್‌ನಲ್ಲಿ ಆಗಿರುವ ಲೋಪದಿಂದ ಈ ಯೋಜನೆ ನಿಂತ ನೀರಾಗಿದೆ.
ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರು ಅಲ್ಲಿಂದ ಬಿಡುಗಡೆಯಾಗುವಾಗ ಮಡಿಲು ಕಿಟ್‌ ಕೇಳಿದರೆ ಸ್ಟಾಕ್‌ ಇಲ್ಲ ಎಂಬ ಸಿದ್ಧ ಉತ್ತರ ಸಿಬ್ಬಂದಿಯಿಂದ ಬರುತ್ತಿದೆ. ‘ಮಡಿಲು ಕಿಟ್‌ ದಾಸ್ತಾನಿಲ್ಲ, ಬಂದ ಮೇಲೆ ನೀಡಲಾಗುವುದು’ ಎಂದು ಗೋಡೆಗೆ ನಾಮಫಲಕ ಅಂಟಿಸಲಾಗಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ಮಡಿಲು ಕಿಟ್‌ ವಿತರಣೆ ಸುಮಾರು ಒಂದು ವರ್ಷದಿಂದ ನಿಂತು ಹೋಗಿದ್ದು. ಅಲ್ಲಿಂದ ಇಲ್ಲಿ ತನಕ ಸಹಸ್ರಾರು ಫಲಾನುಭವಿಗಳು ಮಡಿಲು ಕಿಟ್‌ ಪಡೆಯಲು ಸರತಿಯಲ್ಲಿದ್ದಾರೆ. 2017-18 ನೇ ಸಾಲಿಗೆ ಮಡಿಲು ಕಿಟ್‌ ವಿತರಿಸಲು ಅನುದಾನದ ಅನುಮೋದನೆಯಾಗಿಲ್ಲ. ಈ ಕಾರಣದಿಂದ ಸರಕಾರಿ ಆಸ್ಪತ್ರೆಗಳಲ್ಲಿ ಕಿಟ್‌ ನೀಡುತ್ತಿಲ್ಲ ಎಂಬ ಸರಕಾರಿ ಅದೇಶ ಪತ್ರ ತೋರಿಸಿ ಸಿಬ್ಬಂದಿ, ಬಂದವರನ್ನು ಸಾಗ ಹಾಕುತ್ತಿದ್ದಾರೆ. ಜನಸಂಖ್ಯೆ ಕಡಿಮೆ ಇರುವ ಗ್ರಾಮೀಣ ಪ್ರದೇಶದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಲೂ ಮಡಿಲು ಕಿಟ್‌ ಲಭ್ಯವಿದೆ. ಆದರೆ, ಪಟ್ಟಣ ಪ್ರದೇಶದ ಯಾವುದೇ ಆಸ್ಪತ್ರೆಗಳಲ್ಲಿ ವಿತರಿಸಲು ಲಭ್ಯವಿಲ್ಲ.
ಗುಣಮಟ್ಟವಿಲ್ಲದ ಬಟ್ಟೆಗೆ ಬೇಡಿಕೆ: ಆಸ್ಪತ್ರೆಯಿಂದ ನೀಡುತ್ತಿದ್ದ ಮಡಿಲು ಕಿಟ್‌ ಸಾಮಗ್ರಿಗಳು ಗುಣಮಟ್ಟದಲ್ಲಿರುತ್ತಿದ್ದವು. ಆದರೆ, ಕಿಟ್‌ ವಿತರಣೆ ನಿಂತಿರುವುದರಿಂದ ಮಹಿಳೆಯರು ಆಸ್ಪತ್ರೆ ಆವರಣದಲ್ಲಿ ಮಾರಾಟ ಮಾಡುವ ಗುಣಮಟ್ಟವಿಲ್ಲದ ಟೋಪಿ, ಸ್ವೆಟರ್‌ ಮತ್ತಿತರ ವಸ್ತುಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ.

loading...