ನಗರಸಭೆಯಲ್ಲಿ 500 ಕೋಟಿ ಅಕ್ರಮ: ಪ್ರತಿಭಟನೆ

0
25
loading...

ಗಂಗಾವತಿ: ನಗರಸಭೆಯ ದುರಾಡಳಿತ ವಿರುದ್ದ ಸಿಡಿದೆದ್ದಿರುವ ಜನರು ದಲಿತ ಪ್ರಗತಿಪರ ಸಂಘಟನೆಯ ಆಶ್ರಯದಲ್ಲಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಧರಣಿ ಆರಂಭಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಆರತಿ ತಿಪ್ಪಣ್ಣ ಈ ಸಂದರ್ಭದಲ್ಲಿ ಮಾತನಾಡಿ ಸುಮಾರು 500 ಕೋ.ರು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ನಗರಸಭೆ ನಿವೇಶನ ಕಬಳಿಕೆ ಮತ್ತು ಹಗರಣಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶಾಸಕ ಅನ್ಸಾರಿ ಕುಮ್ಮಕ್ಕು:ಕ್ಷೇತ್ರದ ಶಾಸಕ ಇಕ್ಬಾಲ್‌ ಅನ್ಸಾರಿ ಕುಮ್ಮಕ್ಕಿನಿಂದ ನಗರಸಭೆಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ. ಅನ್ಸಾರಿ ಚೇಲಾಗಳ ಕೈಯಲ್ಲಿ ನಗರಸಭೆ ಆಡಳಿತ ನಡೆಯುತ್ತಿದೆ. ಇದು ಜನರಿಗೆ ನರಕಸಭೆಯಾಗಿದೆ ಎಂದು ಅವರು ಟೀಕಿಸಿದರು.
ನಗರಸಭೆಗೆ ಸೇರಿರುವ ನಿವೇಶನ ಮತ್ತು ಆಸ್ತಿಗಳಿಗೆ ಅನಧಿಕೃತ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ. ಮಹಾವೀರ ವೃತ್ತದಲ್ಲಿ ನಗರಸಭೆ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಾಣಗೊಂಡಿದೆ. ಲಿಂಗಸಗೂರು ರಸ್ತೆ ಚಿನಿವಾಲರ ಆಸ್ಪತ್ರೆ ಹತ್ತಿರ ಕೊಟ್ಯಾಂತರ ರು. ಬೆಲೆಬಾಳುವ ನಿವೇಶನದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಅಗಡಿ ಸಂಗಣ್ಣ ಕ್ಯಾಂಪ್‌ ಸರ್ವೆ ನಂ.26/1, 2, 29 ಕೊಳಚೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ವಾಸ ಮಾಡುತ್ತಿದ್ದ 14 ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೇನಾಮಿ ಹೆಸರಿನಲ್ಲಿ ಈ ನಿವೇಶನಗಳನ್ನು ಮಾರಿದ್ದಾರೆ. ಇದಕ್ಕೆ ಶಾಸಕ ಅನ್ಸಾರಿಯವರು ಹಿಂಬಾಲಕರು ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು. ಇಸ್ಲಾಂಪುರ ವಾರ್ಡ ನಂ.13 ಬಂಬೂ ಬಜಾರ್‌ ಹತ್ತಿರ ಇರುವ ಸ್ಟಾರ್‌ ಪುಟ್‌ವೇರ್‌ ಕಟ್ಟಡ ತೆರವುಗೊಳಿಸಬೇಕು. ನಗರಸಭೆ ಸದಸ್ಯ ಸುಜಾತಾ ಕಾಂಬಳೇಕರ ಪತಿ ರಮೇಶ ಕಾಂಬಳೇಕರ ದುರ್ಗಮ್ಮನ ಹಳ್ಳವನ್ನು ಒತ್ತುವರಿ ಮಾಡಿಕೊಂಡಿ ನಿವೇಶನ ನಿರ್ಮಿಸಿಕೊಂಡಿದ್ದನ್ನು ವಶಪಡಿಸಿಕೊಳ್ಳಬೇಕು. ವಾರ್ಡ ನಂ.7 ರಲ್ಲಿ ಶಾಸಕರ ಆಪ್ತ ಗದ್ವಾಲ್‌ ಖಾಸಿಂಸಾಬ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನು ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಕರಣ ಹಿಂಪಡೆಯಿರಿ:ಪೌರಾಯುಕ್ತ ಖಾಜಾಮೊಹಿನುದ್ದೀನ ಅಕ್ರಮ ಪ್ರಶ್ನೆ ಮಾಡಿರುವ ದಲಿತ ಯುವಕನ ವಿರುದ್ದ ಶಾಸಕ ಅನ್ಸಾರಿ ಚಿತಾವಣೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು ಹಗರಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯರಾದ ಬಿ.ನಾಗರಾಜ, ಈಡಗೇರ ರಾಮಕೃಷ್ಣ, ಶರಣಪ್ಪ ಸಜ್ಜಿಹೊಲ, ವಿಜಯ, ಬಸವರಾಜ ಶಿರಗುಂಪಿ, ಎಂ.ತಿಮ್ಮಣ್ಣ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ, ಮಾಜಿ ಸಂಸದ ಶಿವರಾಮೇಗೌಡರ ಪುತ್ರ ಶಿವರಾಜಗೌಡ, ನವೀನ್‌ ಪಾಟೀಲ್‌ರಿಗೆ ಜೆ.ಭಾರದ್ವಾಜ ಅವಕಾಶ ನೀಡದ ಕಾರಣ ಅವರು ಸ್ಥಳದಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

loading...