ಪಟ್ಟಣದ ಅಭಿವೃದ್ಧಿಗೆ ಕೇಂದ್ರದಿಂದ 5 ಕೋಟಿ ಅನುದಾನ: ಉದಾಸಿ

0
14
loading...

ಹಾನಗಲ್ಲ: ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಗೊಂಡ ಬಳಿಕ ಹಾನಗಲ್ಲ ಪಟ್ಟಣದ ಅಭಿವೃದ್ಧಿಗಾಗಿ ಕೇಂದ್ರದಿಂದ ರೂ.5.06ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ರೂ. 2.12 ಕೋಟಿ ಬಿಡುಗಡೆಗೊಂಡಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಭಾನುವಾರ ಸಂಜೆ ಇಲ್ಲಿನ ವಿರಕ್ತಮಠದ ಸಭಾಂಗಣದಲ್ಲಿ ಎಸ್‌ಎಫ್‌ಸಿ ಮತ್ತು ಪುರಸಭೆ ನಿಧಿಯಿಂದ ವಿವಿಧ ಕಲ್ಯಾಣಕಾರ್ಯಗಳ ಅಡಿಯಲ್ಲಿ ಅಡುಗೆ ಅನಿಲ ಸಂಪರ್ಕ, ಲ್ಯಾಪ್‌ಟ್ಯಾಪ್‌ ವಿತರಣೆ, ಮನೆ ದುರಸ್ತಿಗೆ ಕಾರ್ಯಾದೇಶ, ಕ್ರೀಡೆ, ಸಂಸ್ಕೃತಿಗಳಿಗೆ ಪ್ರೋತ್ಸಾಹಧನ ಮತ್ತು ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ದೇಶದಲ್ಲಿ ಇದ್ದ 16.83 ಕೋಟಿ ಅಡುಗೆ ಅನಿಲ ಸಂಪರ್ಕಗಳು ಈಗ ಉಜ್ವಲ ಯೋಜನೆಯಿಂದ ಸುಮಾರು 25 ಕೋಟಿ ತಲುಪಿದೆ. ಇನ್ನೂ 7 ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಗುತ್ತದೆ. ಉಜ್ವಲ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 9 ಲಕ್ಷ ಅನಿಲ ಸಂಪರ್ಕ ಸಾಧ್ಯವಾಗಿದೆ. ಈ ಪೈಕಿ ಹಾವೇರಿ ಜಿಲ್ಲೆ 48598 ಸಂಪರ್ಕ ಪಡೆದಿದೆ. ಹಾವೇರಿ ಲೋಕಸಭಾ ವ್ಯಾಪ್ತಿಯ ಹಾವೇರಿ-ಗದಗ ಜಿಲ್ಲೆ ಸೆರಿಸಿ ಒಟ್ಟು 78 ಸಾವಿರ ಕುಟುಂಬಕ್ಕೆ ಉಜ್ವಲ ಯೋಜನೆ ಲಾಭ ತಟ್ಟಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮನೋಹರ ತಹಶೀಲ್ದಾರ, ದೂರದೃಷ್ಠಿಯ ಯೋಜನೆ ಪರಿಣಾಮವಾಗಿ ಸತತ 3 ವರ್ಷ ಬರಗಾಲ ಇದ್ದಾಗಲೂ, ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ಬೃಹತ್‌ ಆನಿಕೆರೆ ಆಸರೆ ಒದಗಿಸಿದೆ. ಈ ಕೆರೆಗೆ ಧರ್ಮಾ ಜಲಾಶಯದಿಂದ ನಿರಂತರವಾಗಿ ನೀರು ತುಂಬಿಸುವ ಯೋಜನೆ ಸಾಫಲ್ಯ ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ 250 ನಿವೇಶನ ಹಂಚಿಕೆಗೆ ಸಿದ್ಧಗೊಂಡಿವೆ. 300 ಮನೆಗಳ ನಿರ್ಮಾಣಕ್ಕೆ ಧನ ಸಹಾಯ ನೀಡಲಾಗುತ್ತಿದೆ. ಸ್ಲಂ ಅಭಿವೃದ್ದಿಗೆ ರೂ.75 ಲಕ್ಷ ಬಿಡುಗಡೆಗೊಂಡಿದೆ ಎಂದರು.
ಬಿಜೆಪಿ ಮುಖಂಡ ಸಿ.ಎಂ ಉದಾಸಿ ಮಾತನಾಡಿ, ಉಜ್ವಲ ಯೋಜನೆ ಅಡಿಯಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಪ್ರಥಮ ಆಧ್ಯತೆ ಆಗಬೇಕು. ಈ ನಿಟ್ಟಿನಲ್ಲಿ ವರದಾ ನದಿಯಿಂದ ಹಾನಗಲ್ಲ ಆನಿಕೆರೆಗೆ ನೀರು ತುಂಬಿಸುವ ರೂ. 42 ಕೋಟಿಯ ಕಾಮಗಾರಿ ಅನುಷ್ಠಾನಕ್ಕೆ ಬರದಿರುವುದು ವಿಪರ್ಯಾಸ ಎಂದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಹಸಿನಾಬಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಮುಖ್ಯಾಧಿಕಾರಿ ಎಚ್‌.ಎನ್‌ ಭಜಕ್ಕನವರ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.

loading...