ಬಿಜೆಪಿ ಧೋರಣೆ ಬೇಸತ್ತು ಬಿಎಸ್‌ಪಿಗೆ ಸೇರ್ಪಡೆ: ಕಾದ್ರೋಳಿ

0
17
loading...

ಶಿರಹಟ್ಟಿ: ಬಿಜೆಪಿಯಲ್ಲಿನ ಇತ್ತಿಚಿನ ಬೆಳವಣಿಗೆ ಗಮನಿಸಿ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ದಲಿತ ವಿರೋದಿ ನೀತಿಯಿಂದಾಗಿ ಬಿಜೆಪಿ ತೊರೆದು ಬಿಎಸ್‌ಪಿ ಸೇರಿದ್ದೇನೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ಧ್ವನಿ) ರಾಜ್ಯಾಧ್ಯಕ್ಷ ಚಂದ್ರಕಾಂತ ಎಸ್‌ ಕಾದ್ರೋಳ್ಳಿ ಹೇಳಿದರು.
ಗುರುವಾರ ಶಿರಹಟ್ಟಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಕೆ ಮಹೇಶ ಸಮ್ಮುಖದಲ್ಲಿ ಬಿಜೆಪಿ ತೊರೆದು ಬಿಎಸ್‌ಪಿ ಸೇರ್ಪಡೆಯಾದ ಬಳಿಕ ಅವರು ಮಾತನಾಡಿದರು. ಇದುವರೆಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೆ. ಬಿಜೆಪಿ ಧೋರಣೆಗೆ ಬೇಸತ್ತು ಪಕ್ಷ ತೊರೆದಿದ್ದೇನೆ. ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು. ಈ ಬಾರಿ ಬಹುಸಂಖ್ಯಾತ ಮಾದಿಗ ಸಮುದಾಯದ 20 ಶಾಸಕರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೂ ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್‌ ದಲಿತರನ್ನು ಮತಬ್ಯಾಂಕನ್ನಾಗಿ ಪರಿವರ್ತಿಸಿಕೊಂಡಿದ್ದರೆ. ಬಿಜೆಪಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು. ರಾಜ್ಯದಲ್ಲಿನ ಎರಡು ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್‌, ಬಿಎಸ್‌ಪಿ ಮೈತ್ರಿಕೂಟದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಅವರು ಮನವಿ ಮಾಡಿದರು.
ಈಗಾಗಲೇ ಸುಮಾರು 30 ಜಿಲ್ಲೆಗಳಲ್ಲಿ ಸಂಘಟನೆ ಕಾರ್ಯ ನಡೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಂದ ನಮ್ಮ ಸಮುದಾಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ದಲಿತ ವಿರೋಧಿಯಾಗಿದ್ದು. ನಮ್ಮನ್ನು ಹೀನಾಯವಾಗಿ ಕಾಣುತ್ತಿದ್ದಾರೆ. ಈ ಭಾಗದ ಜನ ನನಗೆ ಬೆಂಬಲ ನೀಡಿ ಮಾದಿಗ ಸಮುದಾಯದ ಶಾಸಕನಾಗಿ ಆಯ್ಕೆ ಮಾಡಬೇಕು ಎಂದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ನಮ್ಮ ಸಮುದಾಯದ ಶಾಸಕರಿದ್ದು, ರಾಜಕೀಯವಾಗಿ ಶಕ್ತಿ ತುಂಬಲು ಎಲ್ಲರೂ ಒಂದಾಗಿ ನಮ್ಮ ಜನಂಗದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಕರೆ ನೀಡಿದರು.
ವೈ ಸಿ ಕಾಂಬಳೆ. ಯಲ್ಲಪ್ಪ ಸಣಕ್ಯಾನವರ, ಅಜೀಜ ಮುಜಾವರ, ಬಾಲಚಂದ್ರ ಚವ್ಹಾಣ, ನಿಂಗರಾಜ ದೊಡ್ಡಮನಿ ,ಮರಿಯಪ್ಪ ಪೂಜಾರ, ಮಾರ್ತಂಡಪ್ಪ ಹಾದಿಮನಿ, ಕೆ ಸಿ ಹೊಸೂರ, ಎಂ ಎಚ್‌ ಕನಕವಾಡ, ದೇವರಾಜ ಕಟ್ಟಿಮನಿ,ಪ್ರಕಾಶ ಬಡೇನವರ ಮತ್ತಿತರಿದ್ದರು.

loading...