ಮಹದಾಯಿ ಹೋರಾಟಕ್ಕೆ ಅಭಾಜಿ ಫೌಂಡೇಶನ್‌ ಸಿದ್ಧ: ಪ್ರಣಯ ಪಾಟೀಲ

0
28
loading...

ರಾಯಬಾಗ 09: ಗೋವಾ ರಾಜ್ಯದಿಂದ ಮಹಾದಾಯಿ ಯೋಜನೆ ಮೂಲಕ ಕುಡಿಯುವ ನೀರನ್ನು ಪಡೆಯಲು ಅಭಾಜಿ ಫೌಂಡೇಶನ್‌ ವತಿಯಿಂದ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಲು ಬರುವ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೋರಾಟ ಮಾಡಲು ಫೌಂಡೇಶನ ಸಿದ್ಧವಿದೆ ಎಂದು ಜಿ.ಪಂ.ಸದ್ಯಸ ಮತ್ತು ಅಭಾಜಿ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಪ್ರಣಯ ಪಾಟೀಲ ಹೇಳಿದರು. ರಾಯಬಾಗ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಅಭಾಜಿ ಫೌಂಡೇಶನ್‌ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮವೇ ಗೋವಾ ಸರಕಾರದ ಮೂಲ ಆದಾಯವಾಗಿದ್ದು, ಇದರಲ್ಲಿ ಕರ್ನಾಟಕದ ಪಾಲು ಶೇ.11.02 ರಷ್ಟಿದೆ. ಪ್ರತಿವರ್ಷ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಸುಮಾರು 2,08,254 ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಪ್ರವಾಸಿ ಇಲಾಖೆ ಸರ್ವೆಯ ಅಂಕಿಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಇದರಿಂದ ಗೋವಾ ಸರಕಾರಕ್ಕೆ ಪ್ರತಿವರ್ಷ ಸುಮಾರು 200 ಕೋಟಿ ಆದಾಯ ಕರ್ನಾಟಕ ರಾಜ್ಯದಿಂದ ಹರಿದು ಹೋಗುತ್ತದೆ ಎಂದು ತಿಳಿಸಿದರು. ನಾವು ಕನ್ನಡಿಗರೆಲ್ಲ ಗೋವಾ ರಾಜ್ಯಕ್ಕೆ ಪ್ರವಾಸಕ್ಕೆ ಹೋಗದೇ ದೂರು ಉಳಿಯುವುದರಿಂದ ಕನ್ನಡಿಗರ ಶಕ್ತಿ ಏನುಂಬುದು ಆ ರಾಜ್ಯಕ್ಕೆ ತಿಳಿಯುತ್ತದೆ. ಗೋವಾ ರಾಜ್ಯದ ಒಟ್ಟು ಆದಾಯದಲ್ಲಿ ಪ್ರವಾಸೋದ್ಯಮದಲ್ಲಿ ಮಹಾರಾಷ್ಟ್ರ ರಾಜ್ಯದ ಪಾಲು ಶೇ.15.71 ರಷ್ಟಿದ್ದು ಪ್ರಥಮ ಸ್ಥಾನದಲ್ಲಿದ್ದರೆ, ದೆಹಲಿ ರಾಜ್ಯದ ಪಾಲು ಶೇ.13.74 ರಷ್ಟಿದ್ದು ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದ ಪಾಲು ಶೇ.11.02 ರಷ್ಟಿದ್ದು ಮೂರನೇ ಸ್ಥಾನದಲ್ಲಿದೆ. ಗೋವಾಕ್ಕೆ ಹೋಗುವ ಕರ್ನಾಟಕದ ಪ್ರವಾಸಿಗ ಅಲ್ಲಿ ಒಂದು ದಿನ ವಾಸ್ತವ್ಯ ಮಾಡಿ ಸುಮಾರು 10 ಸಾವಿರ ಹಣ ಖರ್ಚು ಮಾಡುತ್ತಾನೆ. ಒಬ್ಬ ಪ್ರವಾಸಿಗನು ಕನಿಷ್ಠ ಪಕ್ಷ 3-4 ದಿನಗಳ ವರೆಗೆ ಅಲ್ಲಿ ವಾಸ್ತವ್ಯ ಮಾಡುತ್ತಾನೆಂದು ತಿಳಿಸಿದರು. ಕನ್ನಡಿಗರು ಮತ್ತು ಗೋವಾ ರಾಜ್ಯದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷದವರು ಮಹದಾಯಿ ನದಿ ಯೋಜನೆ ಮುಂದೆ ಇಟ್ಟುಕೊಂಡು, ತಮ್ಮ ಬೆಳೆ ಬೆಯಿಸಿಕೊಳ್ಳಲು ಹವಣಿಸುತ್ತಾರೆ. ಎಲ್ಲ ಪಕ್ಷದ ನಾಯಕರು ರಾಜಕೀಯ ಮಾಡುವುದನ್ನು ಬಿಟ್ಟು ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಮಹಾದಾಯಿ ನೀರು ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದರು. ನಮಗೆ ಕುಡಿಯಲು ನೀರು ಬಿಡುವಂತೆ ಕೇಳುತ್ತಿದ್ದೇವೆ. ಕನ್ನಡಿಗರ ಮನವಿಗೆ ಸ್ಪಂದಿಸಿ ಪೋಲಾಗಿ ಸಮುದ್ರಕ್ಕೆ ಸೇರುವ ನೀರನ್ನು ಕರ್ನಾಟಕ ಜನತೆಗೆ ಬಿಟ್ಟು ಕೊಟ್ಟು ಗೋವಾ ರಾಜ್ಯ ಸರಕಾರ ಮಾನವಿಯತೆ ಮೆರೆಯಬೇಕೆಂದರು. ಗೋವಾ ರಾಜ್ಯದ ಜನರು ಕರ್ನಾಟಕ ಜನರ ಹೋರಾಟಕ್ಕೆ ಬೆಂಬಲಿಸಿ, ಇಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿ ತಮ್ಮ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ, ಕರ್ನಾಟಕಕ್ಕೆ ನೀರು ಹರಿಸುವಂತೆ ಒತ್ತಾಯಿಸಿಬೇಕೆಂದರು. ಗ್ರಾ.ಪಂ.ಅಧ್ಯಕ್ಷ ಮಹಾದೇವ ಕೋಕಾಟೆ, ರಮೇಶ ಕುಂಬಾರ, ರಮೇಶ ಜಗದಾಳೆ, ಅಪ್ಪಾಸಾಬ ಕೆಂಗನ್ನವರ, ಸುಭಾಷ ಗಸ್ತಿ, ಶಿವಲಿಂಗ ಹಳಿಂಗಳಿ, ಫಿರೋಜ ಮುಲ್ಲಾ, ಬಾದಾಷಾ ಡಾಂಗೆ ಸೇರಿದಂತೆ ಇತರರು ಇದ್ದರು. …

loading...