ರಸ್ತೆ ಕಾಮಗಾರಿಗಳಿಗೆ 5 ಕೋಟಿ ರೂ. ಅನುದಾನ

0
13
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ನೀರಾವರಿ ನಿಗಮ ನಿಯಮ ಇದರ ವತಿಯಿಂದ ಹಳಿಯಾಳ ತಾಲೂಕಿನ ವಿವಿಧೆಡೆಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಐದು ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ಅಂಬಿಕಾನಗರ ಜಿಲ್ಲಾ ಪಂಚಾಯತ ಕ್ಷೇತ್ರದ 10 ಗ್ರಾಮಗಳಲ್ಲಿ, ತೇರಗಾಂವ ಜಿಲ್ಲಾ ಪಂಚಾಯತ ಕ್ಷೇತ್ರದ 5 ಗ್ರಾಮಗಳಲ್ಲಿ, ಕಾವಲವಾಡ ಜಿಲ್ಲಾ ಪಂಚಾಯತ ಕ್ಷೇತ್ರದ 6 ಗ್ರಾಮಗಳಲ್ಲಿ ಹಾಗೂ ಮುರ್ಕವಾಡ ಜಿಲ್ಲಾ ಪಂಚಾಯತ ಕ್ಷೇತ್ರದ 8 ಗ್ರಾಮಗಳಲ್ಲಿ ಒಟ್ಟು 500 ಲಕ್ಷ ರೂ. ವೆಚ್ಚಗಳಲ್ಲಿ ವಿವಿಧ ಕಾಮಗಾರಿಗಳನ್ನು ಕರ್ನಾಟಕ ನೀರಾವರಿ ನಿಗಮ ನಿಯಮದ ವತಿಯಿಂದ ಹಮ್ಮಿಕೊಳ್ಳಲಾಗುವುದು.
ಬಹುದಿನಗಳ ಬೇಡಿಕೆಯಂತೆ ಸಾತ್ನಳ್ಳಿಯಿಂದ ಹೋಮನಳ್ಳಿ ವರೆಗೆ 150 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವನ್ನು ಪಂಚಾಯತರಾಜ್ ಮತ್ತು ಗ್ರಾಮಾಭಿವೃದ್ಧಿ ಇಲಾಖೆಯಿಂದ ನೆರವೇರಿಸಲಾಗುವುದು. ಹಳಿಯಾಳ ಹಾಗೂ ಜೋಯಿಡಾ ತಾಲೂಕಿನ ವಿವಿಧ ಕಾಮಗಾರಿಗಳಿಗೆ 40 ಲಕ್ಷ ರೂ. ಅನುದಾನವು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 42.50 ಲಕ್ಷ ರೂ., ವಿವಿಧ ರಸ್ತೆ ಕಾಮಗಾರಿಗಳಿಗೆ ಪಂಚಾಯತರಾಜ್ ಮತ್ತು ಗ್ರಾಮಾಭಿವೃದ್ಧಿ ಇಲಾಖೆಯಿಂದ 15 ಕೋಟಿ ರೂ. ವಿಶೇಷ ಅನುದಾನ ಹಾಗೂ 30 ಲಕ್ಷ ರೂ. ಅನುದಾನ ಮಂಜೂರಾಗಿದೆ. ಜೋಯಿಡಾ ತಾಲೂಕಿನ ಜಾನಪದ ವಿಶ್ವವಿದ್ಯಾಲಯಕ್ಕೆ 450 ಕೋಟಿ ರೂ. ಅನುದಾನ ಮಂಜೂರಾಗಿದ್ದು, ‘ನಮ್ಮ ಗ್ರಾಮ ನಮ್ಮ ರಸ್ತೆ’ ನಿರ್ವಹಣೆಗಾಗಿ 100 ಲಕ್ಷ ರೂ., ದಾಂಡೇಲಿ ಮೊಸಳೆಪಾರ್ಕ್‍ಗೆ ಹಾಗೂ ರಿವರ್ ಪಾರ್ಕ್‍ಗೆ ತಲಾ 3 ಕೋಟಿ ರೂ., ದಾಂಡೇಲಿಯ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ನಬಾರ್ಡ್‍ನಿಂದ 21.75 ಕೋ. ರೂ. ಮಂಜೂರಾಗಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಜೋಯಿಡಾ ತಾಲೂಕಿನ 3 ಅತಿಮುಖ್ಯ ರಸ್ತೆಗಳ ಸುಧಾರಣೆ ಮತ್ತು ಸೇತುವೆ ನಿರ್ಮಾಣಕ್ಕೆ 8.23 ಕೋಟಿ ರೂ. ಅನುದಾನ ಮಂಜೂರಾಗಿದೆ. ರಾಜ್ಯ ಸರ್ಕಾರವು ಕೃಷಿ ಭೂಮಿಯಲ್ಲಿ ನಿರ್ಮಿಸಿದ ಫಾರ್ಮ್ ಹೌಸ್ ಕುರಿತು ಮಾರ್ಗಸೂಚಿಗಳನ್ನು ನೀಡಿದ್ದು ಗೊಂದಲವನ್ನು ಸರಿಪಡಿಸಿ ಕೃಷಿಕರಿಗೆ ಅನುಕೂಲವಾಗುವಂತೆ ಮಾಡಲಾಗಿದೆ.

ಜೆಸಿಬಿ ಇಂಡಿಯಾ ಲಿಮಿಟೆಡ್ ಇಂಡಿಯಾ ಮತ್ತು ಟಾಟಾ ಹಿಟಾಚಿ ಇವರ ವತಿಯಿಂದ ಉದ್ಯಮ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್) ದಿಂದ 7 ಕೆರೆಗಳನ್ನು ಹೂಳೆತ್ತುವ ಕಾಮಗಾರಿಗಳನ್ನು ಪುನರಾರಂಭಿಸಲಾಗಿದೆ.

loading...