ವೈದ್ಯಕೀಯ ಸೇವೆ ಒಂದು ಮಾಫಿಯಾ ಆಗಿ ಬೆಳೆದು ನಿಂತಿದೆ: ಸಚಿವ ಅನಂತಕುಮಾರ

0
35
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ವೈದ್ಯಕೀಯ ಸೇವೆ ಎಂಬುವುದು ಒಂದು ಮಾಫಿಯಾ ಆಗಿ ಬೆಳೆದು ನಿಂತಿದೆ. ಇದನ್ನು ತೊಡೆದು ಹಾಕುವ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ 100 ಬೆಲೆಯುಳ್ಳ ಔಷದಿ ಕೇವಲ 25 ರೂಪಾಯಿಯಲ್ಲಿ ಲಭಿಸುವ ಜನ ಔಷಧಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಅವರು ಬುಧವಾರ ಇಲ್ಲಿಯ ಟಿ.ಡಿ.ಬಿ ರಸ್ತೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಯಾವುದೇ ಒಂದು ಔಷಧಿ ಬಿಡುಗಡೆಯಾಗಬೇಕಾದರೆ ಸುಮಾರು 20-25ವರ್ಷಗಳ ಕಾಲ ಸಂಶೋಧನೆ ಮಾಡಬೇಕು. ಅದರ ಹಿಂದೆ ದೊಡ್ಡ ಕಸರತ್ತು ಇದೆ. ಅದರ ಉತ್ಪಾದನಾ ವೆಚ್ಚ ಕೇವಲ 1 ರೂಪಾಯಿ ಇರಬಹುದು ಆದರೆ ಅದನ್ನು ಮಾರುಕಟ್ಟೆಯಲ್ಲಿ 500ರೂ.ಗೆ ಮಾರಾಟ ಮಾಡಲಾಗುತ್ತದೆ. ಕಾರಣ ಅದರ ಹಿಂದೆ ಇರುವ ಸಾವಿರಾರು ರೂ.ಗಳ ಖರ್ಚು ಇರುತ್ತದೆ ಮತ್ತು ಆ ಔಷಧಿ ಕಂಪನಿಗಳಿಗೆ 20ವರ್ಷಗಳ ಕಾಲ ಒಂದು ನಿಗದಿತ ದರಕ್ಕೆ ಮಾರಾಟ ಮಾಡಲು ಸರ್ಕಾರ ಅನುಮತಿ ಕೊಟ್ಟಿರುತ್ತದೆ. ಆದರೆ ಆ ಕಂಪನಿಯವರು 30ವರ್ಷಗಳಾದರೂ ಸಹಿತ ಅದೇ ಬೆಲೆಗೆ ಆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೆಲ್ಲವನ್ನು ಪಟ್ಟಿ ಕಂಪನಿಗಳಿಗೆ ಕಡಿವಾಣ ಹಾಕಿ ಹೊಸ ಕಾನೂನು ತಂದು ಅದಕ್ಕೊಂದು ಹೊಸ ಯೋಜನೆ ಮಾಡಿ ‘ಜನ ಔಷಧಿ ಕೇಂದ್ರ’ವನ್ನು ಪ್ರಾರಂಭಿಸಲಾಯಿತು. ಮಾರುಕಟ್ಟೆಯಲ್ಲಿ 100ರೂ.ಗೆ ಸಿಗುವ ಔಷಧಿಯನ್ನು ಇಲ್ಲಿ ಕೇವಲ 20-30ರೂ.ಗೆ ಕೊಡಲಾಗುತ್ತದೆ. ಹಾಗಾಗಿ ಬಡವರು ಈ ಜನ ಔಷಧಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಟಿ.ಪಾಟೀಲ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕರ ಆಡಳಿತಕ್ಕೆ ಬಂದ ಬಳಿಕ ಜನಪರವಾದ ಹತ್ತಾರು ಯೋಜನೆಗಳು ಜಾರಿ ಮಾಡಿದ್ದಾರೆ. ಅವುಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು. ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್‌, ಸದಸ್ಯ ಗಣಪತಿ ವಡ್ಡರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ ನಾಯ್ಕ, ತಾಲೂಕಾಧ್ಯಕ್ಷ ಗುಡ್ಡಪ್ಪ ಕಾತೂರ ಮುಂತಾದವರು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯಾಧಿಕಾರಿ ಎಸ್‌.ಎಸ್‌ ಪಟ್ಟಣಶೆಟ್ಟಿ ಸ್ವಾಗತಿಸಿದರು. ಡಿ.ಜೆ ಕುಲಕರ್ಣಿ ನಿರೂಪಿಸಿದರು.

loading...