ಸಕ್ಕರೆ ದರ ಕುಸಿತ ಕಾರಖಾನೆಗಳಿಗೆ ಆತಂಕ:ಡಾ. ಪ್ರಭಾಕರ ಕೋರೆ

0
33
loading...

ಚಿಕ್ಕೋಡಿ 05: ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇದ್ದಕ್ಕಿದ್ದಂತೆ 2800 ಆಸುಪಾಸು ತಲುಪಿರುವುದು ಕಾರಖಾನೆಗಳಿಗೆ ಹಾನಿಯನ್ನುಂಟು ಮಾಡಲಿದ್ದು, ಸರಕಾರವೇ ಕಾರಖಾನೆಗಳನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ದೂಧಗಂಗಾ ಸಹಕಾರಿ ಸಕ್ಕರೆ ಕಾರಖಾನೆಯ ರೂವಾರಿ ಡಾ. ಪ್ರಭಾಕರ ಕೋರೆ ಒತ್ತಾಯಿಸಿದರು.
ಸ್ಥಳೀಯ ದೂಧಗಂಗಾ ಸಹಕಾರಿ ಸಕ್ಕರೆ ಕಾರಖಾನೆಯ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರಖಾನೆಯೂ ರೈತಮುಖಿ ಚಟುವಟಿಕೆಗಳ ಮೂಲಕ ಅಭಿವೃದ್ಧಿಪಥದತ್ತ ಸಾಗಿದ್ದು, ಆಡಳಿತ ಮಂಡಳಿ ಅವಿರೋಧ ಆಯ್ಕೆ ಮೂಲಕ ಸದಸ್ಯರು ಕಾರಖಾನೆ ಆಡಳಿತ ಮಂಡಳಿ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ ಎಂದರು.
ಕಬ್ಬು ಬೆಳೆಯುವ ಪದ್ಧತಿ, ಬೆಲೆ ನಿಗದಿ ಸೇರಿದಂತೆ ಕಬ್ಬು ಬೆಳೆಗೆ ವೈಜ್ಞಾನಿಕತೆಯ ಸ್ಪರ್ಶ ನೀಡುವ ಅಗತ್ಯವಿದ್ದು, ರೈತರಯ ನೀರಾವರಿ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರೂ ವೈಜ್ಞಾನಿಕ ಪದ್ಧತಿಗಳ ಅನುಸರಿಸುತ್ತಿಲ್ಲ. ಇದರಿಂದಾಗಿ ಇಳುವರಿ ಕುಸಿತ, ಭೂಮಿಯ ಫಲವತ್ತತೆ ನಾಶ, ಯಂತ್ರದಿಂದ ಕಬ್ಬು ಕಟಾವು ಸಮಸ್ಯೆ ಎದುರಾಗುವ ಜೊತೆಗೆ ರೈತನ ಜೊತೆಗೂ ಕಾರಖಾನೆಗೂ ತೊಂದರೆ ಎದುರಾಗುತ್ತಿದೆ ಎಂದರು. ಕಬ್ಬು ಕಟಾವು ಯಂತ್ರ ಬಳಕೆಯ ಅನಿವಾರ್ಯತೆ ಎದುರಾಗಿದ್ದು ಕಾರಖಾನೆಯಿಂದ 23 ಯಂತ್ರಗಳು ಕಾರ್ಯಾಚರಣೆಯಲ್ಲಿದ್ದು ಯಂತ್ರದ ಕಾರ್ಯಾಚರಣೆಗೆ ಅನುಗುಣವಾಗಿ ಕಬ್ಬು ಬೆಳೆಯಬೇಕೆಂದರು.

ಈ ಸಂದರ್ಭದಲ್ಲಿ ಸಂಚಾಲಕರಾದ ಅಜೀತ ದೇಸಾಯಿ, ಬಾಳಗೌಡ ರೆಂದಾಳೆ, ಭರತೇಶ ಬನವಣೆ, ಚೇತನ ಪಾಟೀಲ, ಮಹಾವೀರ ಮಿರ್ಜೆ, ಮಲ್ಲಪ್ಪಾ ಮೈಶಾಳೆ, ಮಲ್ಲಿಕಾರ್ಜುನ ಕೋರೆ, ಪರಸಗೌಡ ಪಾಟೀಲ, ರಾಮಚಂದ್ರ ನಿಶಾನದಾರ, ಸಂದೀಪ ಪಾಟೀಲ, ತಾತ್ಯಾಸಾಹೇಬ ಕಾಟೆ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಆರ್‌.ಸಿ. ಪಟ್ಟಣಶೆಟ್ಟಿ ಸ್ವಾಗತಿಸಿದರು. ಶಿವಾನಂದ ಹಕಾರೆ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

loading...