ಸರ್ಕಾರ ನೀರಾವರಿ ಯೋಜನೆಗೆ ಆದ್ಯತೆ ನೀಡಲಿ: ರಾಜೇಶ್ವರಿ

0
18
loading...

ನರಗುಂದ: ಕೃಷಿಯಲ್ಲಿ ಬದುಕು ಸಾಗಿಸುವುದು ಈ ಮೊದಲಿನಂತೆ ಉಳಿದುಕೊಂಡಿಲ್ಲ. ಕಾರಣ ಸಕಾಲಕ್ಕೆ ಮಳೆಯಾಗದೇ ರೈತರು ಬೆಳೆ ತೆಗೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ರೈತರ ಬಾಳು ಹಸನಾಗುವಂತೆ ನೋಡಿಕೊಳ್ಳಬೇಕೆಂದು ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ವೀರನಗೌಡ್ರ ತಿಳಿಸಿದರು.
ಪಟ್ಟಣದ ಈಶ್ವರಿ ವಿದ್ಯಾಲಯದಿಂದ ಹಮ್ಮಿಕೊಂಡ 82 ನೇ ತ್ರೀಮೂರ್ತಿ ಶಿವಜಯಂತಿ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಕೃಷಿಯಲ್ಲಿ ಆಧ್ಯಾತ್ಮ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕೃಷಿಯಲ್ಲಿ ಸಾಧನೆಮಾಡುವ ಮನೋಭಾವವನ್ನು ಹಮ್ಮಿಕೊಂಡು ಇದಕ್ಕಾಗಿ ಬಹಳಷ್ಟು ಶ್ರಮಿಸಿದ್ದೇನೆ. ಕುಳಗೇರಿ ಬಳಿಯಲ್ಲಿಯ ನಮ್ಮ ಫಾರ್ಮನಲ್ಲಿ ಅನೇಕ ಬೆಳೆ ತೆಗೆಯಲು ಶ್ರಮಪಡುತ್ತಿರುವುದು ಈಗಲೂ ಮುಂದುವರೆದಿದೆ. ಸಕಾಲಕ್ಕೆ ಬೆಳೆ ಚೆನ್ನಾಗಿ ಬರಬೇಕೆಂಬುದು ಎಲ್ಲರಂತೆಯೂ ನನ್ನ ಹಂಬಲ. ಆದರೆ ಸಕಾಲಕ್ಕೆ ಮಳೆ ಇಲ್ಲ. ಉತ್ತಮ ರಸಗೊಬ್ಬರ ಹಾಗೂ ಕ್ರಿಮಿನಾಷಕ ಔಷಧಿಗಳು ಬೆಳೆಗಳಿಗೆ ಸಿಂಪರಿಸಲು ಗುಣಾತ್ಮಕ ಮಟ್ಟದಲ್ಲಿ ದೊರೆಯುತಿಲ್ಲ. ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ. ಭಿತ್ತನೆ ಪೂರ್ವ ಭಿತ್ತನೆಯ ಎಲ್ಲ ಬೀಜಗಳನ್ನು ಹೆಚ್ಚಿನ ಬೆಲೆ ನೀಡಿ ತಂದು ರೈತರು ಭಿತ್ತನೆಮಾಡುತ್ತಾರೆ. ಆದರೆ ಫಸಲು ಬಂದ ನಂತರ ಆ ಉತ್ಪನ್‌ದ ಬೆಲೆ ಬಹಳಷ್ಟು ಕಡಿಮೆಯಾಗಿರುತ್ತದೆ. ಇಂತಹ ಅವ್ಯವಸ್ಥೆ ಹೋಗಬೇಕು. ರೈತರು ಬೆಳೆದ ಬೆಳೆ ಹೆಚ್ಚಿನ ರೀತಿಯ ಬೆಲೆಯಲ್ಲಿ ಮಾರಾಟಗೊಳ್ಳುವಂತಾಗಬೇಕು. ಮಹದಾಯಿ ನದಿ ನೀರಿನ್ನು ಮಲಪ್ರಭೆಗೆ ಸೇರಿಸಿ ಎಂದು ನಾಡಿನಲ್ಲಿ ರೈತರು ಬಹು ದಿನದಿಂದ ಹೋರಾಟ ಮಾಡುತಿದ್ದಾರೆ. ಆದರೆ ಈ ಯೋಜನೆ ಕೈಗೂಡಿಸಲು ಸರ್ಕಾರಗಳು ಮನಸ್ಸು ಮಾಡುತಿಲ್ಲವೆಂದು ಅವರು ವಿಷಾಧವ್ಯಕ್ತಪಡಿಸಿದರು.
ಹರಪನಹಳ್ಳಿ ಈಶ್ವರಿ ವಿದ್ಯಾಲಯದ ಸುಮಂಗಲಕ್ಕ, ಪ್ರಭಕ್ಕ, ಯಲ್ಲಣ್ಣ ಗುಜಮಾಗಡಿ, ಝ.ಎಂ. ಖಾಜಿ ಮಾತನಾಡಿದರು. ವೇದಿಕೆ ಮೇಲೆ ಚನ್ನಪ್ಪ ಕೋರಿ, ರಮೇಶ ಬೋನಗೇರಿ, ನಾರಾಯಣ ದೇವಾಡಿಗ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈಶ್ವರಿ ವಿದ್ಯಾಲಯದಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಅರವಿಂದ ಮೇಗೂರ ಭಕ್ತಿ ಗೀತೆ ಪ್ರಸ್ತುತಪಡಿಸಿದರು. ಪ್ರಭಕ್ಕ ನಿರ್ವಹಿಸಿದರು.

loading...