ಸಹಕಾರಿ ಸಂಸ್ಥೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿವೆ: ಶಾಸಕ ಶಿವರಾಮ

0
25
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಹಕಾರಿ ಕ್ಷೇತ್ರ ಬದಲಾವಣೆಗಳಿಗೆ ಹೊಂದಿಕೊಂಡು ತಮ್ಮನ್ನು ತೊಡಗಿಸಿಕೊಳ್ಳದಿದ್ದರೆ ಸಹಕಾರಿ ಸಂಘಗಳ ಉಳಿವು ಅಸಾಧ್ಯ. ಆದರೆ ಉತ್ತರಕನ್ನಡದ ಸಹಕಾರಿ ಸಂಸ್ಥೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡು ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಮಂಚಿಕೇರಿಯಲ್ಲಿ ಹಾಸಣಗಿ ಸೇವಾ ಸಹಕಾರಿ ಸಂಘವು ನೂತನವಾಗಿ ನಿರ್ಮಿಸಿದ ಸಂಘದ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಸಹಕಾರಿ ವ್ಯವಸ್ಥೆ ರೈತರ ಸಮಗ್ರ ಅಭಿವೃದ್ಧಿಗೆ ಕಾರಣವಾಗಿದ್ದು, ಹೆಚ್ಚಿನ ಜನರ ಬದುಕು ಕಟ್ಟಿಕೊಟ್ಟಿದ್ದು, ಇನ್ನೂ ಹೆಚ್ಚಿನ ಜನರಿಗೆ ಬದುಕು ನೀಡಲಿ ಎಂದು ಹಾರೈಸಿದ ಅವರು ಈ ಕ್ಷೇತ್ರದ ಉನ್ನತಿಗೆ ಹಲವು ಹಿರಿಯರ ಅಪೂರ್ವ ಕೊಡುಗೆ ಕಾರಣವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಕೆಲವು ವರ್ಷಗಳ ಹಿಂದೆ ಬೆಳವಣಿಗೆಗೆ ಹಲವು ಅಡ್ಡಿ ಆತಂಕಗಳು ಉಂಟಾಗಿದ್ದರೂ, ಅವುಗಳನ್ನು ಮೀರಿ ಸಹಕಾರಿ ಕ್ಷೇತ್ರ ಅತ್ಯಂತ ಎತ್ತರಕ್ಕೆ ಬೆಳೆದಿದೆ ಎಂದು ವಿವರಿಸಿದರು.
ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಜಾನನ ಗಾಂವ್ಕರ, ಭರತನಹಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೇರಂಬ ಹೆಗಡೆ. ಹಿತ್ಲಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಿ.ಟಿ.ಹೆಗಡೆ ಜಾಲೀಮನೆ, ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ಜಿ.ಎಸ್‌.ಜಯಪ್ರಕಾಶ, ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎನ್‌.ಎನ್‌.ಹೆಗಡೆ, ಸಂಘದ ಮುಖ್ಯಕಾರ್ಯನಿರ್ವಾಹಕ ಜಿ.ಜಿ.ಹೆಗಡೆ ಕನೇನಳ್ಳಿ, ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಜ ರಾಜೇಶ್ವರಿ ಪ್ರೌಢಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಸಂಘದ ಅಧ್ಯಕ್ಷ ಆರ್‌.ಎನ್‌.ಹೆಗಡೆ ಗೋರ್ಸಗದ್ದೆ ಸ್ವಾಗತಿಸಿದರು. ವಾಸುಕಿ ಹೆಗಡೆ ನಿರೂಪಿಸಿದರು.

loading...