ಸಿಎಂಗೆ ಒತ್ತಡ ಹೆರಿದ್ದೇ ಆದರೆ ಗೋಕಾಕ ಜಿಲ್ಲೆಯಾಗಲಿದೆ: ಬಾಲಚಂದ್ರ

0
21
loading...

ಕನ್ನಡಮ್ಮ ಸುದ್ದಿ-ಗೋಕಾಕ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೆರಿದ್ದೇ ಆದರೆ ಗೋಕಾಕ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯಿಂದ ನಡೆದ ಬೃಹತ್‌ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಗೋಕಾಕ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಿಲ್ಲೆ ಮಾಡುವ ವಿಶ್ವಾಸ ಹೊಂದಿದ್ದಾರೆಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಡಿಸೆಂಬರ್‌ 21 ರಂದು ಗೋಕಾಕ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜಿಲ್ಲೆಯನ್ನು ವಿಂಗಡಿಸಿ ಹೊಸ ಜಿಲ್ಲೆಗಳ ರಚನೆಗೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಬೆಳಗಾವಿಯ ಕೆಲ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಹೋರಾಟವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ನಾವುಗಳು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಿಎಂ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣವೆಂದು ಹೇಳಿದರು.
ಫೆ. 16 ರಿಂದ 28 ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದ್ದು, ಅದರೊಳಗೆ ಗೋಕಾಕದಿಂದ ನಿಯೋಗವನ್ನು ಒಯ್ಯಲಾಗುವುದು. ತಾಲೂಕಿನ ಮಠಾಧಿಶರುಗಳು, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಮುಖಂಡರುಗಳನ್ನೊಳಗೊಂಡ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗೋಕಾಕ ಜಿಲ್ಲೆಯನ್ನಾಗಿಸಲು ಆಗ್ರಹಿಸಲಾಗುವುದು ಎಂದು ಹೇಳಿದರು.
ಕಳೆದ 4 ದಶಕಗಳಿಂದ ನಡೆಯುತ್ತಿರುವ ಹೋರಾಟವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಶೂನ್ಯ ಸಂಪಾದನ ಮಠದ ಸ್ವಾಮೀಜಿಗಳು ಇದರ ನೇತೃತ್ವ ತೆಗೆದುಕೊಂಡಿದ್ದು, ಜಿಲ್ಲೆಯಾಗುವ ಕಾಲ ಕೂಡಿ ಬಂದಿದೆ. ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕ ಮತ್ತು ಚಿಕ್ಕೋಡಿಯನ್ನು ಹೊಸ ಜಿಲ್ಲೆಗಳನ್ನಾಗಿ ರಚಿಸುವಂತೆ ಮನವಿ ಮಾಡಿಕೊಂಡ ಅವರು, ಅಭಿವೃದ್ಧಿ ಹಿನ್ನೆಲೆಯಲ್ಲಿ ಹೊಸ ಜಿಲ್ಲೆಗಳ ರಚನೆ ಅವಶ್ಯವಾಗಿದೆ ಎಂದು ಹೇಳಿದರು.
ಕೌಜಲಗಿ ತಾಲೂಕು ರಚಿಸಿ: ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಸಿಎಂ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡ ಅವರು, ತಾಲೂಕಾ ಹೋರಾಟಕ್ಕಾಗಿ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಕೌಜಲಗಿ ಭಾಗದವರ ಹೋರಾಟಕ್ಕೆ ನ್ಯಾಯ ಒದಗಿಸಿಕೊಡುವಂತೆ ಕೋರಿದರು.
ಸಿಎಂ ಭೇಟಿ ನಂತರ ಹೋರಾಟದ ನಿರ್ಧಾರ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳಲಾಗುವುದು. ಸಿದ್ಧರಾಮಯ್ಯನವರ ಮನೋಭಾವನೆ ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಅರಿತು ಹೋರಾಟಕ್ಕೆ ಅಣಿಯಾಗೋಣ. ಅಲ್ಲಿಯವರೆಗೆ ಶಾಂತ ರೀತಿಯಿಂದ ಗೋಕಾಕ ಪ್ರತ್ಯೇಕ ಜಿಲ್ಲೆಗಾಗಿ ಮುರುಘರಾಜೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟಕ್ಕೆ ಇಳಿಯೋಣ ಎಂದರು.
ವಕೀಲರ ಸಂಘಕ್ಕೆ ಅಭಿನಂದನೆ: ಜಿಲ್ಲಾ ಸಲುವಾಗಿ ನಡೆಯುತ್ತಿರುವ ಹೋರಾಟವನ್ನು ಜೀವಂತಗೊಳಿಸಿದ ಕೀರ್ತಿ ನ್ಯಾಯವಾಧಿಗಳ ಸಂಘಕ್ಕೆ ಸಲ್ಲುತ್ತದೆ ಎಂದು ಅಭಿನಂದಿಸಿದರು. ಬಾಲಚಂದ್ರ ಅವರಿಂದ ಹೋರಾಟಕ್ಕೆ ಆನೆ ಬಲ ಮುರುಘರಾಜೇಂದ್ರ ಶ್ರೀಗಳು : ಪ್ರತಿಭಟನಾ ಹೋರಾಟದ ನೇತೃತ್ವ ವಹಿಸಿಕೊಂಡ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಗೋಕಾಕ ಜಿಲ್ಲಾ ಹೋರಾಟದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಪಾಲ್ಗೊಳ್ಳುವ ಮೂಲಕ ನಮಗೆಲ್ಲ ಆನೆಬಲ ಬಂದಂತಾಗಿದೆ. ನಾವೆಲ್ಲರೂ ಬಾಲಚಂದ್ರ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ಮಾಡೋಣ. ಜಾರಕಿಹೊಳಿ ಸಹೋದರರಿಂದ ಮಾತ್ರ ಗೋಕಾಕ ಜಿಲ್ಲೆಯಾಗಲು ಸಾಧ್ಯವಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಎಲ್‌. ಮುತ್ತೆನ್ನವರ ಮಾತನಾಡಿ, ಜಿಲ್ಲೆಗಾಗಿ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಹೊಸ ಜಿಲ್ಲೆಯನ್ನಾಗಿ ರಚಿಸುವಂತೆ ಆಗ್ರಹಿಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್‌.ವ್ಹಿ.ದೇಮಶೆಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲೆ ವಿಭಜನೆಗೆ ಕೆಲವು ಸಂಘಟನೆಗಳು ಅಡ್ಡಿಪಡಿಸುತ್ತಿರುವುದು ವಿಷಾದನೀಯ. ಜಿಲ್ಲಾ ಹೋರಾಟಕ್ಕೆ ಸಂಘದಿಂದ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಉಪವಿಭಾಗಾಧಿಕಾರಿಗಳ ಕಾರ್ಯಾಲಯವನ್ನು ಗೋಕಾಕದಲ್ಲಿಯೇ ಶೀಘ್ರದಲ್ಲಿಯೇ ಆರಂಭಿಸಬೇಕು. ಯಾವುದೇ ಕಾರಣಕ್ಕೂ ಬೈಲಹೊಂಗಲಕ್ಕೆ ಹೋಗುವುದಿಲ್ಲ. ನಮ್ಮ ಕಾರ್ಯಕಲಾಪಗಳ ಅನುಕೂಲಕ್ಕಾಗಿ ಗೋಕಾಕದಲ್ಲಿಯೇ ಪ್ರಾರಂಭಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಮಾಜಿ ನಗರಾಧ್ಯಕ್ಷರಾದ ಸಿದ್ದಲಿಂಗ ದಳವಾಯಿ, ಎಸ್‌.ಎ. ಕೋತವಾಲ, ಲಗಮವ್ವಾ ಸುಲಧಾಳ, ಹಿರಿಯ ವಕೀಲ ಬಿ.ಆರ್‌. ಕೊಪ್ಪ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಜಿಪಂ ಸದಸ್ಯರಾದ ಟಿ.ಆರ್‌.ಕಾಗಲ, ಮಡ್ಡೆಪ್ಪ ತೋಳಿನವರ, ಮುಖಂಡರಾದ ನಿಂಗಪ್ಪ ಫಿರೋಜಿ, ಅಶೋಕ ಪರುಶೆಟ್ಟಿ, ಹನಮಂತ ತೇರದಾಳ, ವೀರಣ್ಣಾ ಹೊಸೂರ, ಬಸವಂತ ಕಮತಿ, ಎಂ.ಎಂ. ಪಾಟೀಲ, ಅಶೋಕ ನಾಯಿಕ, ಸಿ.ಡಿ. ಹುಕ್ಕೇರಿ, ಎಲ್‌.ಎನ್‌. ಬೂದಿಗೊಪ್ಪ, ಹಿರಿಯ ಸಾಹಿತಿಗಳಾದ ಪ್ರೋ. ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ, ಡಾ.ಸಿ.ಕೆ. ನಾವಲಗಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಅಶೋಕ ಓಸ್ವಾಲ್‌, ಶಿವಾನಂದ ಡೋಣಿ, ಡಿ.ಎಂ. ದಳವಾಯಿ, ರಾಮಣ್ಣಾ ಹುಕ್ಕೇರಿ, ಮಾರುತೆಪ್ಪ ನಿರ್ವಾಣಿ, ರಾಮಣ್ಣಾ ಹಂದಿಗುಂದ, ರವಿ ಸೋನವಾಲ್ಕರ, ಪರಶುರಾಮ ಭಗತ, ಲಕ್ಷ್ಮಣ ತೆಳಗಡೆ, ಸತ್ತೆಪ್ಪ ಕರವಾಡಿ, ಕಿರಣ ಡಮಾಮಗರ, ಯೂನುಸ್‌ ನದಾಫ್‌ ನಗರಸಭೆ ಸದಸ್ಯರು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ತಾಪಂ, ಪಪಂ ಸದಸ್ಯರುಗಳು, ವರ್ತಕರು ಸೇರಿದಂತೆ ಸಾವಿರಾರು ಜನರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಮುರುಘರಾಜೇಂದ್ರ ಮಹಾಸ್ವಾಮಿಗಳು ತಹಶೀಲ್ದಾರ ಜಿ.ಎಸ್‌. ಮಳಗಿ ಅವರಿಗೆ ಮನವಿ ಅರ್ಪಿಸಿದರು. ಇದಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪನೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಬಳಿಕ ರಾಯಣ್ಣನ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್‌ ಮೆರವಣಿಗೆ ಮೂಲಕ ಆಗಮಿಸಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪನೆ ಮಾಡಿದರು.

loading...