ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ: ಶಾಸಕ ಡಾ.ವಿಶ್ವನಾಥ

0
36
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕೌಶಲಗಳನ್ನು ಹೊರತರವು ಪ್ರಯತ್ನ ಮಾಡಬೇಕೆಂದು ಶಾಸಕ ವಿಶ್ವನಾಥ ಪಾಟೀಲಹೇಳಿದರು.
ಅವರು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ನವಚೇತನ ಯುವಕ ಸಂಘ ನಯಾನಗರ ಇವರ ಸಂಯುಕ್ತ ಆಶ್ರಯದಲ್ಲಿ ನಯಾನಗರ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ಬೈಲಹೊಂಗಲ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ-2017-18 ನೇ ಸಾಲಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಬ್ಬರು ಕ್ರೀಡಾ ಸ್ಪೂರ್ತಿ ಹೊಂದಿದವರಾಗಿದ್ದು ಅವರಿಗೆ ಸರ್ವ ರೀತಿಯ ಸಹಕಾರ ನೀಡಲಾಗುವುದು.
ಮುಖ್ಯ ಅಥಿತಿಗಳಾಗಿ ಜಿಪಂ.ಸದಸ್ಯ ಅನೀಲ ಮೇಕಲಮರ್ಡಿ, ಗ್ರಾಪಂ.ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸುವದರಿಂದ ಅವರಿಗೆ ಪೂರಕವಾಗಲು ಶಾಲಾ ಆವರಣದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲು ಅನುದಾನ ಒದಗಿಸಲಾಗುವದು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ನಲವಡೆ ಮಾತನಾಡಿ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಆರೋಗ್ಯವಂತ ಹಾಗೂ ಸದೃಡ ಶರೀರವನ್ನು ಹೊಂದಬೇಕಾದರೆ ಪ್ರತಿಯೊಬ್ಬ ಮನುಷ್ಯನು ದೇಹವನ್ನು ಹದಗೊಳಿಸುವ ಕ್ರೀಡೆಯಲ್ಲಿ ಭಾಗವಹಿಸುವುದು ಅತ್ಯವಶ್ಯವಾಗಿದೆ. ಏಕೆಂದರೆ ಆರೋಗ್ಯವಂತ ಶರೀರದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಅಂತಹ ಮನಸ್ಸನ್ನು ಕೇಂದ್ರೀಕರಣಗೊಳಿಸಿದಲ್ಲಿ ಮಾತ್ರ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಆ ಕಾರಣ ನಿರ್ಣಾಯಕರು ನಿಸ್ಪಕ್ಷಪಾತ ನಿರ್ಣಯ ನೀಡಿ ಯಶಸ್ವಿಗೊಳಿಸಬೇಕೆಂದರು.
ವೇದಿಕೆಯ ಮೇಲೆ ಗಂಗಯ್ಯ ಹಿರೇಮಠ, ಚಂದ್ರಪ್ಪ ಉಜ್ಜಿನಕೊಪ್ಪ, ವಿಠ್ಠಲಪ್ಪ ಶಿದ್ರಾಮನ್ನವರ, ಗ್ರಾಪಂ.ಮಾಜಿ ಅಧ್ಯಕ್ಷ ಬೀಮಪ್ಪ ಕರಿದೇಮನ್ನವರ, ಸದಸ್ಯ ಪ್ರಕಾಶ ಅಡಕಿ, ಮಹಾಂತೇಶ ಮರೆಕ್ಕನವರ, ಸುರೇಶ ಮಾಟೋಳ್ಳಿ, ಮಂಜುನಾಥ ಸಂಗೊಳ್ಳಿ, ಎಸ್‌.ಡಿ.ಎಮ್‌.ಸಿ ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ, ಯುವಜನ ಕ್ರೀಡಾ ಇಲಾಖೆ ಸಂಯೋಜಕ ಎಮ್‌.ಬಿ. ಭದ್ರಶಟ್ಟಿ, ಸಂಘದ ಕಾರ್ಯದರ್ಶಿ ಚರಂತಯ್ಯ ಹಿರೇಮಠ, ಸೇರಿದಂತೆ ಇತರರು ಇದ್ದರು.
ಅದರಂತೆ ನಯಾನಗರ ಶಾಲಾ ಮಕ್ಕಳು ಎನ್‌.ಎನ್‌.ಎಂ.ಎಸ್‌. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಅಶ್ವಿಣಿ ತೋಟಗಿ, 7ನೇಯ ಸ್ಥಾನ ಪಡೆದ ಅಶ್ವಥ ಸಂಕನ್ನವರ, ನೇತ್ರಾವತಿ ಅಬ್ಬಾರ, ಅಂಜನಾ ಚಿಕ್ಕನ್ನವರ ಅವರು ಸ್ಥಾನ ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನ ಮಾಡುವ ಮೂಲಕ ಅಭಿನಂದಿಸಿದರು. ಶಿಕ್ಷಕ ಬಿ.ವಿ.ಪತ್ತಾರ ನಿರೂಪಿಸಿದರು. ಎಮ್‌.ಬಿ.ತೋಟಗಿ ಸ್ವಾಗತಿಸಿದರು, ಅರ್‌.ಬಿ.ಹಾದಿಮನಿ ವಂದಿಸಿದರು.

loading...