ಸೌಹಾರ್ದ ಸಮಾಜ ಕಟ್ಟುವಲ್ಲಿ ಯುವಜನರು ಮುಂದೆ ಬರಬೇಕಿದೆ: ಹುದ್ದಾರ

0
23
loading...

ದಾಂಡೇಲಿ: ಇಂದು ಸಮಾಜ ಜಾತಿ, ಧರ್ಮ, ಭಾಷೆ, ಗಡಿ, ಅಸಮಾನತೆಗಳ ಸಂಘರ್ಷದಲ್ಲಿ ಕಳೆದು ಹೋಗುತ್ತಿದೆ. ಸಮಾಜ ಒಡೆಯುವ ಇಂತಹ ಸಂಗತಿಗಳಿಂದ ದೂರವಾಗಿ ಸೌಹಾರ್ದ ಸಮಾಜ ಕಟ್ಟುವಲ್ಲಿ ವಿದ್ಯಾರ್ಥಿ, ಯುವಜನರು ಮುಂದೆ ಬರಬೇಕಿದೆ ಎಂದು ಜನಪದ ವಿದ್ವಾಂಸ, ಸಾಹಿತಿ ಡಾ. ಶ್ರೀಶೈಲ್‌ ಹುದ್ದಾರ ನುಡಿದರು.
ಅವರು ದಾಂಡೇಲಿಯ ಸರಕಾರಿ ಪದವಿ ಮಹಾವಿದ್ಯಾಲಯ ಕೋಗಿಲಬನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎನ್‌.ಎಸ್‌.ಎಸ್‌. ಶಿಬಿರಗಳು ಕೇವಲ ಸ್ವಚ್ಚತೆ, ಉಪನ್ಯಾಸಗಳಿಗೆ ಸೀಮಿತವಾಗಿರದೇ, ಸಮಾಜದ ಪಿಡುಗುಗಳನ್ನು ಹೋಗಲಾಡಿಸುವಂತ ಕೆಲಸವನ್ನು ಮಾಡಬೇಕಾಗಿದೆ. ಜನರಲ್ಲಿರುವ ಕಂದಾಚಾರಗಳನ್ನು ತೊಡೆದು ಹಾಕುವಂತಹ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಚಾರ್ಯ ಡಾ. ಎಮ್‌.ಡಿ. ಒಕ್ಕುಂದ ಶಿಬಿರದ ದ್ಯೇಯೋದ್ಧೇಶ ವಿವರಿಸಿ, ಪ್ರತೀ ದಿನ ನಾಡಿನ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಗಿಲಬನದಂತ ಸುಂದರ, ಸೌಹಾರ್ದ ಪ್ರದೇಶದಲ್ಲಿ ಈ ಶಿಬಿರ ನಡೆಸುವುದಕ್ಕೆ ಹೆಮ್ಮೆಯಿದೆ. ಇಲ್ಲಿಯ ಜನರು ಅವರಾಗಿಯೇ ಆತಿಥ್ಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಗಿದೆ ಎಂದರು. ವೇದಿಕೆಯಲ್ಲಿ ಕೋಗಿಲಬನ ಗ್ರಾಮ ಪಂಚಾಯತ ಉಪಾಧ್ಯಕ್ಷ ರಮೇಶ್‌ ನಾಯ್ಕ, ಸದಸ್ಯ ಅಶೋಕ ನಾಯ್ಕ, ಯುವ ಮುಖಂಡ ಅಮೀನ್‌ ಸಂಶೀದ, ಜೋಯಿಡಾ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಎಸ್‌. ಅಂಗಡಿ, ದಾಂಡೇಲಿ ಕಾಲೇಜಿನ ಉಪನ್ಯಾಸಕರಾದ ಡಾ. ಬಿ.ಎನ್‌. ಅಕ್ಕಿ, ಡಾ. ಸುಜಾತಾ ಮುಗದುಂ, ಮುಂತಾದವರಿದ್ದರು. ಕಾಲೇಜಿನ ಉಪನ್ಯಾಸಕ ಡಾ. ಎನ್‌.ಎಮ್‌. ಜಂಗೂಬಾಯಿ ಸ್ವಾಗತಿಸಿದರು. ಉಪನ್ಯಾಸಕಿ ಲಕ್ಷ್ಮೀಬಾಯಿ ವಂದಿಸಿದರು. ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಮಂಜುನಾಥ ಚಲವಾದಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಧಾರವಢದ ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರ ಜನ ಜಾಗೃತಿಯ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತು.

 

loading...