ಹಳೆ ಕಟ್ಟಡ ದುರಸ್ಥಿ ಬೇಡ: ಹೊಸ ಕಟ್ಟಡ ನಿರ್ಮಿಸಿ

0
29
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಈಗ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಪಂಚಾಯತ ಕಾರ್ಯಾಲಯ ದುರಸ್ತಿಗೆ ಹಣ ಮೀಸಲಿಡಬೇಕು ಎಂದು ಪಪಂ ಮುಖ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ ಸದಸ್ಯ ಸಿ.ಕೆ ಮುಳಗುಂದ ಹಳೆಯ ಕಟ್ಟಡ ರಿಪೇರಿ ಬೇಡ ನೂತನ ಕಟ್ಟಡ ನಿರ್ಮಾಣ ಮಾಡೋಣ ಎಂದರು.
ಆಗ ಮಧ್ಯ ಪ್ರವೇಶಿಸಿದ ಪಪಂ ಅಧ್ಯಕ್ಷ ಹೊಸ ಕಟ್ಟಡ ನಿರ್ಮಾಣಕ್ಕೆ ಅಭಿಯಂತರರು ಎಸ್ಟಿಮೆಶನ ಪ್ರತಿ ನೀಡಿದರೆ ಶಾಸಕರೊಂದಿಗೆ ಚರ್ಚಿಸಿ ಸುಮಾರು 2 ಕೋಟಿ ರೂ. ಅನುದಾನ ತರಲು ಪ್ರಯತ್ನಿಸುವದಾಗಿ ಹೇಳಿದಾಗ ಪಪಂ ಅಭಿಯಂತರರಿಗೆ ಶಿರಹಟ್ಟಿ ಪಪಂನಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿ ಎರಡು ದಿನಗಳಾದರೂ ಅವರು ಇಂದಿನ ಸಭೆಗೆ ಬಂದಿಲ್ಲ. ಇದರಿಂದ ಪಪಂ ಕೆಲಸಗಳು ಕುಂಟಿತಗೊಳ್ಳುತ್ತಿವೆ ಎಂದು ಮುಖ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.
ಪಟ್ಟಣದ ತಹಶೀಲ್ದಾರ ಕಾಯಾಲಯದಲ್ಲಿ ಜಿ.ಪಂ ಸಿಇಒ ಅಧ್ಯಕ್ಷತೆಯಲ್ಲಿ ಜರುಗಿದ ಕುಂದು ಕೊರತೆ ಸಭೆಯಲ್ಲಿ ಸದಸ್ಯರೆಲ್ಲರು ಪಪಂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಖಾಸಗಿ ಅಭಿಯಂತರರನ್ನು ಸಂಪರ್ಕಿಸಿ ಒಳ್ಳೆಯ ಡಿಸೆನ್‌ ಹಾಗೂ ಎಸ್ಟಿಮೆಶನ್‌ ಮಾಡಿಸುವಂತೆ ಠರಾವು ಪಾಸು ಮಾಡಲು ಒಪ್ಪಿಗೆ ಸೂಚಿಸಿದರು.
ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ: ಶುದ್ದ ಕುಡಿಯುವ ನೀರಿನ ಘಟಕ್ಕೆ÷ಚಾಲನೆ, ಹೊಸ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕುರಿತು ಹಾಗೂ ಮಾರಾಟ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ಸ್ಥಳೀಯ ಕುಂದು ಕೊರತೆ ನಿವಾರಣಾ ಸಮಿತಿ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ಪಟ್ಟಣದ ಎರಡು ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದ ಖಾಸಗಿ ವ್ಯಕ್ತಿಗಳು ಅದರ ವಿದ್ಯುತ್‌ ಬಿಲ್‌ ಬಾಕಿ ಇಟ್ಟಿದ್ದು, ಯಂತ್ರೋಪಕರಣಗಳು ರಿಪೇರಿಗೆ ಬಂದಿವೆ. ಲಕ್ಷಾಂತರ ರೂಪಾಯಿ ವೆಚ್ಚ ತಗುಲಲಿದ್ದು ಶುದ್ಧ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದರು. ಸದಸ್ಯ ಜಿ.ಆರ್‌.ಕುಲಕರ್ಣಿ ಮಾತನಾಡಿ, ಕಾನೂನು ರೀತಿ ಕ್ರಮ ಜರುಗಿಸಿ ಪಟ್ಟಣದ ಜನತೆಗೆ ತ್ವರಿತವಾಗಿ ಶುದ್ದ ಕುಡಿಯುವ ನೀರು ದೊರಬೇಕಿಸಿ ಎಂದರು. ಉಳಿದ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಿ ಇದರಿಂದ ಪಪಂಗೆ ಆದಾಯ ಬರುತ್ತದೆ ಎಂದು ಸದಸ್ಯ ಸಿ ಕೆ ಮುಳಗುಂದ, ನಾಗರಾಜ ಲಕ್ಕುಂಡಿ ಹೇಳಿದರು.
ಮೂಲಭೂತ ಸೌಕರ್ಯ ಕಲ್ಪಿಸಿ: ಶಿರಹಟ್ಟಿಯಿಂದ ಛಬ್ಬಿಗೆ ಹೋಗುವ ರಸ್ತೆಯಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗಿದ್ದು ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯ ನಾಗರಾಜ ಲಕ್ಕುಂಡಿ ಮುಖ್ಯಾಧಿಕಾರಿಗಳಿಗೆ ತಿಳಿಸಿದರು. ಸದಸ್ಯ ಗುಳಪ್ಪ ಕರಿಗಾರ ಮೂಲಭೂತ ಸಮಸ್ಯೆಗಳಿರುವ ಎಲ್ಲ ಕಡೆಗೂ ಸೌಲಭ್ಯ ಕಲ್ಪಿಸುವಂತೆ ಹೇಳಿದರು.
ಸ್ವಚ್ಛತೆ ಕಾಪಾಡಿ:ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ನಾಗರಿಕರಲ್ಲಿ ಶುಚಿತ್ವ ಕಾಪಾಡಲು ಜಾಗೃತಿ ಮೂಡಿಸಿ ಎಂಟ-ಹತ್ತು ಬಾರಿ ಎಚ್ಚರಿಕೆ ಕೊಡಲಾಗುವುದು. ಪರಿಸರ ಮಲಿನ ಮಾಡಿದರೇ ದಂಡ ವಿಧಿಸಲಾಗುವುದು. ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತವಾಗುವುದಕ್ಕೆ ಎಲ್ಲ ಸದಸ್ಯರು ಕೈಜೋಡಿಸಬೇಕು ಎಂದು ಮುಖ್ಯಾಧಿಕಾರಿ ಶೋಭಾ ಬೆಳ್ಳಕೊಪ್ಪ ತಿಳಿಸಿದರು.
ಸಭೆಯಲ್ಲಿ ತಾಲೂಕಾ ಕೇಂದ್ರದಲ್ಲಿ ಇಂದಿರಾ ಕಾಂಟೀನ್‌ ಸ್ಥಾಪನೆಗೆ ಬೇಕಾಗುವ ಸಾಮಗ್ರಿಗಳನ್ನು ಪೂರೈಸಲು ಸುಮಾರು 12 ಲಕ್ಷ ರೂ. ಅನುದಾನ ಅವಶ್ಯಕತೆ ಇದೆ ಎಂದು ಸಭೆಗೆ ತಿಳಿಸಿದರು. ಸ್ವಚ್ಚ ಸವೇಕ್ಷಣಾ/ವೈಯಕ್ತಿಕ ಶೌಚಾಲಯ ನಿರ್ಮಾಣ, 2017-18 ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ ಕಾಮಗಾರಿ ಬದಲಾವಣೆ, 2012-13 ನೇ ಸಾಲಿನ 13 ನೇ ಹಣಕಾಸು ಸಾಮಾನ್ಯ ಕಾರ್ಯಾಧಾರಿತ ಅನುದಾನದ ಕಾಮಗಾರಿಯ ಟೆಂಡರ ರದ್ದುಪಡಿಸುವ, ಕಾಮಗಾರಿ ಬದಲಾವಣೆ, 13-14 ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದ ಕಾಮಗಾರಿ ಬದಲಾವಣೆ ಕುರಿತು ಚರ್ಚೆ ನಡೆಯಿತು.
ಉಪಾಧ್ಯಕ್ಷೆ ಕಾಶವ್ವ ಹುಲಕಡ್ಡಿ, ವಿಮಲಕ್ಕ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಚಾಂದಸಾಬ ಮುಳಗುಂದ, ಬಾಲಚಂದ್ರ ಇಟಗಿ, ಸಂತೋಷ ಕುರಿ, ಗೂಳಪ್ಪ ಕರಿಗಾರ, ಮಾಬುಸಾಬ ಮುಳಗುಂದ, ಶಹನಾಜಬೀ ಬುವಾಜಿ, ಲಲಿತಾ ಕಲ್ಲಪ್ಪನವರ, ಮೀನಾಕ್ಷಿ ತಳವಾರ, ಸಾವಿತ್ರಿ ಬಡಿಗೇರ, ಸುಜಾತಾ ಗೋಡೆಣ್ಣವರ,ರೇಖಾ ಅಕ್ಕಿ, ಪರಮೇಶ ಪರಬ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಶೋಭಾ ಬೆಳ್ಳಕೊಪ್ಪ ಸಭೆಯ ಕಾರ್ಯಕಲಾಪ ನಡೆಸಿದರು. ಆರ್‌ ಐ ಗುರುಪ್ರಸಾದ ವಂದಿಸಿದರು.

loading...