ಅಂಗವಿಕಲರಿಗೆ ತ್ರಿಚಕ್ರ ಸ್ಕೂಟರ್‌ ವಿತರಿಸಿದ ಶಾಸಕ ಸೈಲ್‌

0
24
loading...

ಕನ್ನಡಮ್ಮ ಸುದ್ದಿ-ಕಾರವಾರ: ನಗರಸಭೆಯ 2017-18ನೇ ಸಾಲಿನಲ್ಲಿ ಶೇ.3 ರ ಅನುದಾನದಲ್ಲಿ ಅಂಗವಿಕಲರಿಗೆ ನೀಡಲಾಗುವ ತ್ರಿಚಕ್ರ ಸ್ಕೂಟರ್‌ನ್ನು ಆಯ್ದ 8 ಫಲಾನುಭವಿಗಳಿಗೆ ಶಾಸಕ ಸತೀಶ್‌ ಸೈಲ್‌ ಅವರು ಇಲ್ಲಿನ ನಗರಸಭೆ ಆವರಣದಲ್ಲಿ ವಿತರಿಸಿದರು. ಬಳಿಕ ಮಾತನಾಡಿದ ಸತೀಶ ಸೈಲ್‌ ನಗರಸಭೆಯ 2017-18ನೇ ಸಾಲಿನಲ್ಲಿ ಶೇ.3 ರ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸ್ಕೂಟರ್‌ನ್ನು ನೀಡಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ವ್ಯಾಪ್ತಿಗೆ ಈ ಹಿಂದೆ 122 ಮನೆಗಳು ಮಂಜೂರಾಗಿತ್ತು. ಆದರೆ ಇದನ್ನು 31 ವಾರ್ಡಗಳಿಗೆ ಹಂಚಲು ತೀವ್ರ ತೊಂದರೆಯಾಗಿತ್ತು. ಸಾಕಷ್ಟು ಮನೆಗಳ ಬೇಡಿಕೆ ಇರುವುದರಿಂದ ಎಲ್ಲ ವಾರ್ಡಗಳಿಂದ ನೂರಾರು ಮನವಿಗಳು ನಗರಸಭೆಗೆ ಬಂದಿದ್ದವು. ಇದರಿಂದ ವಿತರಣೆ ಕಷ್ಟವಾಗಿದ್ದರಿಂದ ನಗರ ವಸತಿ ಸಚಿವರಾದ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿ ಹೆಚ್ಚುವರಿ ಮನೆಗಳನ್ನು ನೀಡುವಂತೆ ಒತ್ತಾಯಿಸಿದ್ದೆ. ಅದರಂತೆ ಎರಡು ಬಾರಿ ಸೇರಿ ಒಟ್ಟು 375 ಮನೆಗಳನ್ನು ನಗರಸಭೆಗೆ ಮಂಜೂರಿ ನೀಡಿದ್ದಾರೆ. ಪ್ರತಿ ಮನೆಗೆ ತಗಲುವ 2.70 ಲಕ್ಷದಂತೆ ಸುಮಾರು 10 ಕೋಟಿ ರೂ.ಗಳನ್ನು ವಸತಿ ಸಚಿವರು ಬಿಡುಗಡೆ ಮಾಡಿದ್ದಾರೆ. ಅಧಿಕಾರಿಗಳು ಕೂಡಲೇ ಅತೀ ಅವಶ್ಯವಿದ್ದವರಿಗೆ ಪಕ್ಷಾತೀತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಂತರ ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಲಾದ ಫಲಾನುಭವಿಗಳಾದ ಶಿವಾನಂದ ಬಕ್ಕರ, ಅರವಿಂದ್‌ ಸುರಂಗೇಕರ್‌, ರಾಮದಾಸ ಮೊರ್ಜೆ, ಪ್ರಕಾಶ ಕೋಳಂಬಕರ, ರಾಜೇಂದ್ರ ನಾಯ್ಕ, ಕಾನ್ಹೋಪಾತ್ರಾ ಮೊರ್ಜೆ, ಆನಂದು ಗುನಗಿ, ಸಂತೋಷ ಸುರೇಶ ನಾಯ್ಕ ಅವರಿಗೆ ಶಾಸಕರು ಟಿವಿಎಸ್‌ ಕಂಪೆನಿಯ ತ್ರಿಚಕ್ರ ಸ್ಕೂಟರ್‌ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ವಿ. ನಾಯ್ಕ, ಸದಸ್ಯ ಪ್ರೇಮಾನಂದ ಗುನಗಾ, ಮಾಜಿ ಕೆಡಿಎ ಅಧ್ಯಕ್ಷ ಶಂಭು ಶೆಟ್ಟಿ ಇದ್ದರು.

loading...