ಅನಕೂಲಕ್ಕೆ ತಕ್ಕಂತೆ ಧರ್ಮಗಳ ಬಳಕೆ: ಭಾಗ್ಯಲಕ್ಷ್ಮಿ

0
13
loading...

ಮುಂಡರಗಿ: ಸಮಾಜದಲ್ಲಿ ಸಹಬಾಳ್ವೆ ಹಾಗೂ ಸಾಮರಸ್ಯ ಮೂಡಿಸಬೇಕಾಗಿದ್ದ ಜಾತಿ ಹಾಗೂ ಧರ್ಮಗಳು ಜನರ ಮಧ್ಯದಲ್ಲಿ ಕಂದಕಗಳನ್ನು ಸೃಷ್ಟಿಸಿ ಸಮಾಜವನ್ನು ವಿಭಜಿಸುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಮಹಿಳಾ ಚಿಂತಕಿ ಭಾಗ್ಯಲಕ್ಷ್ಮಿ ಇನಾಮತಿ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌.ಎಂ.ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಮಹಾವೀರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅಸ್ಥಿತ್ವದಲ್ಲಿರುವ ಎಲ್ಲ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆಯನ್ನು ಬೋಧಿಸುತ್ತವೆ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಮಾಜ ಹಾಗೂ ಧರ್ಮಗಳಲ್ಲಿ ಒಡಕು ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಕೆಲವು ಸ್ವಾರ್ಥಿಗಳಿಗೆ ಧರ್ಮ, ಜಾತಿ, ಸಮಾಜಕ್ಕಿಂತ ಅಧಿಕಾರ ಮುಖ್ಯವಾಗಿದ್ದು, ಅವರು ತಮ್ಮ ಅನಕೂಲಕ್ಕೆ ತಕ್ಕಂತೆ ಧರ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಬುದ್ಧ, ಮಹಾವೀರ, ಬಸವಣ್ಣ, ಪೈಗಂಬರ್‌, ಮಹಾತ್ಮಾ ಗಾಂಧಿ, ಅಂಬೇಡ್ಕರ್‌ ಮೊದಲಾದ ಮಹಾತ್ಮರು ಜಗತ್ತಿಗೆ ಶಾಂತಿ ಸಂದೇಶಗಳನ್ನು ಸಾರಿ ಹೋಗಿದ್ದಾರೆ. ಆದರೆ ನಾವು ಅವುಗಳನ್ನು ಮರೆತು ಕೇವಲ ಅವರ ಜಯಂತಿಗಳನ್ನು ಆಚರಿಸುವ ಮೂಲಕ ಅವರಿಗೆ ಅವಮಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಎಂ.ಬಿ.ಕನ್ಯಾಳ ಮಾತನಾಡಿ, ಮಕ್ಕಳು ಬುದ್ಧ. ಬಸವ, ಗಾಮಧಿಯಂತಹ ಮಹಾತ್ಮರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಚನ್ನಾಗಿ ಅಭ್ಯಾಸ ಮಾಡಿ ಕಲಿತ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಮಲ್ಲಾರ್ಜಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಂ.ಕೆ.ಮಠದ ಮಾತನಾಡಿದರು. ಉಪಾಧ್ಯಕ್ಷರಾದ ಸಾವಿತ್ರಿ ಬಂಡಿವಡ್ಡರ, ಶಿಕ್ಷಕಿಯರಾದ ಜಿ.ಎಲ್‌.ಹೊಸೂರ, ಸುಜಾತಾ ಬೆಟಗೇರಿ, ಶಾಂತಾ ಹಿರೇಮಠ, ರತ್ನಾ ಚವಡಿ ಹಾಜರಿದ್ದರು. ಶಿಕ್ಷಕ ಎಂ.ಕೆ.ಮಾದರ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

loading...