ಎಸ್‌ಸಿ-ಎಸ್‌ಟಿಗೆ ನೀಡುವ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

0
13
loading...

ಕನ್ನಡಮ್ಮ ಸುದ್ದಿ-ಕಾರವಾರ: ಎಸ್‌ಸಿ ಹಾಗೂ ಎಸ್‌ಟಿ ಜನಾಂಗಕ್ಕೆ ನೀಡುವ ಸೌಲಭ್ಯಗಳ ಮಂಜೂರಾತಿಯನ್ನು ವಿನಾಃ ಕಾರಣ ವಿಳಂಬ ಮಾಡುತ್ತಾ ಕಾಲಹರಣ ನಡೆಸುತ್ತಿದ್ದಾರೆಂದು ಆರೋಪಿಸಿ ನಗರಸಭೆಯ 21 ನೇ ವಾರ್ಡ್‌ನ ಸಾರ್ವಜನಿಕರು ಸ್ಥಳಿಯ ನಗರಸಭೆಯ ಅಧ್ಯಕ್ಷ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದರು.
ನಗರಸಭೆಯ ಮಾಜಿ ಸದಸ್ಯ ಸತೀಶ ಕೊಳಂಬಕರ್‌ ನೇತೃತ್ವದಲ್ಲಿ ನಗರಸಭೆಗೆ ಆಗಮಿಸಿದ ಸಾರ್ವಜನಿಕರು ಎಸ್‌ಸಿ ಹಾಗೂ ಎಸ್‌ಟಿಗಳಿಗೆ ವಿವಿಧ ಯೋಜನೆಗಳಲ್ಲಿ 18 ಲಕ್ಷ ರೂ. ಮೀಸಲಿರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯುಕ್ತರು ಪತ್ರಕ್ಕೆ ಸಹಿ ಹಾಕಿ ಟೆಂಡರ್‌ ಕರೆಯಲು ನಗರಸಭಾಧ್ಯಕ್ಷರಿಗೆ ಕಳಿಸಿದ್ದಾರೆ. ಆದರೆ ಅಧ್ಯಕ್ಷರು ಈ ಯೋಜನೆಗೆ ಮತ್ತಷ್ಟು ಹೆಚ್ಚಿಗೆ ಹಣದ ಅನುದಾನ ಸೇರಿಸಬೇಕು ಎಂದು ಪತ್ರವನ್ನು ತಡೆಹಿಡಿದಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಅಧ್ಯಕ್ಷರೆಡೆಗೆ, ಅಧ್ಯಕ್ಷರು ಅಧಿಕಾರಿಗಳತ್ತ ಬೆರಳು ತೋರಿಸುತ್ತಿದ್ದಾರೆ. ಈ ಫಲಾನುಭವಿಗಳ ಆತಂಕಕ್ಕೆ ಕಾರಣ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದು ಈ ಅನುದಾನ ಎಸ್‌ಸಿ ಮತ್ತು ಎಸ್‌ಸಿಗಳಿಗೆ ಸಿಗದೇ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೊನೆಗೂ ಫಲಾನುಭವಿಗಳ ಒತ್ತಡಕ್ಕೆ ಮಣಿದ ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಬಿಲ್‌ಗೆ ಸಹಿಹಾಕಲು ಒಪ್ಪಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ ಕೊಳಂಬಕರ ಅಧಿಕಾರಿಗಳ ಹಾಗೂ ಸದಸ್ಯರ ನಡುವಿನ ಗೊಂದಲದಿಂದ ಅಮಾಯಕ ಜನತೆ ತೊಂದರೆಗೀಡಾಗುತ್ತಿದ್ದಾರೆ. ಒಂದೊಮ್ಮೆ ಅಧಿಕಾರಿಗಳು ಈ ಯೋಜನೆಗಳಿಗೆ ಸಂಬಂಧಿಸಿದಂತೆ ಟೆಂಡರ್‌ ಕರೆಯಲು ವಿಫಲರಾದರೆ ಇನ್ನೊಂದು ವಾರದಲ್ಲಿ ನಗರಸಭೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

loading...