ಕನ್ನಡ ಲಿಪಿಯಂತ ಸುಂದರವಾದ ಭಾಷೆ ಇನ್ನೊಂದಿಲ್ಲ: ಪುಟ್ಟಪ್ಪ

0
23
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಕನ್ನಡವನ್ನು ಚೆನ್ನಾಗಿ ಕಲಿತರೆ ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂಗಾಗಿದ್ದು, ಕನ್ನಡ ಲಿಪಿಯಂತ ಸುಂದರವಾದ ಭಾಷೆ ಇನ್ನೊಂದಿಲ್ಲ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಇಂದೂರ ಶ್ರೀಮಂಜುನಾಥ ಶಿಕ್ಷಣ ಮತ್ತು ಸಮಾಜ ಸೇವಾ ಟ್ರಸ್ಟ್‌(ರಿ), ಆರ್‌.ಕೆ.ಎನ್‌. ಕಾನ್ವೆಂಟ್‌ ವತಿಯಿಂದ ಹಮ್ಮಿಕೊಂಡ ‘ಧರ್ಮಶ್ರೀ’ ಪ್ರಶಸ್ತಿ ಪುರಸ್ಕಾರ ವನ್ನು ಸ್ವೀಕರಿಸಿ ಮಾತನಾಡಿದರು. ಈಗಿನ ಶಾಲೆಗಳಲ್ಲಿ ಶಿಕ್ಷಣ ಸುಧಾರಿಸಬೇಕೆಂದರೆ ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಆಸಕ್ತಿವಹಿಸಬೇಕು ಹಾಗೂ ಸಮಾನತೆಯಿಂದ ಕಾಣಬೇಕು. ಹಲವಾರು ದೇಶಗಳ ಶಿಕ್ಷಣ ಪದ್ದತಿಯನ್ನು ಆಲಿಸಿದ ನನಗೆ ನಮ್ಮ ದೇಶದಲ್ಲಿನ ಶಿಕ್ಷಣದ ಬಗ್ಗೆ ಹೆಮ್ಮೆಯಾಗುತ್ತದೆ. ನಮ್ಮ ಶಿಕ್ಷಕರಿಗೆ ಹೊಣೆಗಾರಿಕೆ ಇದೆ. ಕನ್ನಡದ ಜೊತೆಗೆ ಇಂಗ್ಲೀಷ ಶಿಕ್ಷಣದ ಅಗತ್ಯವೂ ಕೂಡ ಇದೆ. ಹಾಗಂತ ನೀವು ಇಂಗ್ಲೀಷ ಕಲಿತರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹೋಗಬಹುದು ಎಂದು ತಿಳಿದಿರುವುದು ತಪ್ಪು ಕಲ್ಪನೆ. ಏಕೆಂದರೆ ಜಗತ್ತಿನಲ್ಲಿ ಅಭಿವೃದ್ದಿ ಹೊಂದಿದ ಕೆಲ ರಾಷ್ಟ್ರಗಳಲ್ಲಿಯೇ ಇಂಗ್ಲೀಷ ಮಾತನಾಡಲಾಗುವುದಿಲ್ಲ.
ಸಂಸ್ಥೆಯ ಅಧ್ಯಕ್ಷ ಧರ್ಮರಾಜ ನಡಗೇರಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡದ ಉಳಿವಿಗೆ ಪಾಟೀಲ ಪುಟ್ಟಪ್ಪ ಅವರ ಶ್ರಮ ಹಾಗೂ ಹೋರಾಟ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಉದ್ಯಮಿ ಅಶೋಕ ಪಾಲೇಕರ, ವಿ.ಎಸ್‌.ಕೊಣಸಾಲಿ, ಬಿ.ಕೆ.ಪಾಟೀಲ್‌, ಆನಂದಗೌಡರು ಮಾತನಾಡಿದರು. ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಶಿವಾಜಿ ಸುಣಗಾರ, ಶಿವಾಜಿ ದೇವಿಕೊಪ್ಪ, ನಾಗರಾಜ ಅಂಟಾಳ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಸ್ವಾಗತ ಗೀತೆ ಹಾಡಿದರು. ಧರ್ಮರಾಜ ನಡಗೇರಿ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ಪಾಟೀಲ ನಿರೂಪಿಸಿ. ಎಸ್‌.ವೈ ಕುನ್ನೂರ ವಂದಿಸಿದರು.

loading...